ಮಾಸ್ಕೋ (ರಷ್ಯಾ): ರಷ್ಯಾ ಆಕ್ರಮಿತ ಕ್ರಿಮಿಯಾದಲ್ಲಿ ಚಂಡಮಾರುತವು ವಿನಾಶದ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಚಂಡಮಾರುತದಿಂದ ಅಪಾರ ಪ್ರಮಾಣದ ಮರಗಳು ನೆಲಕ್ಕುರುಳಿವೆ. ರಸ್ತೆಗಳು ಜಲಾವೃತವಾಗಿವೆ. ವಿದ್ಯುತ್ ವ್ಯತ್ಯಯದಿಂದ 5 ಲಕ್ಷಕ್ಕೂ ಹೆಚ್ಚು ಜನ ಕತ್ತಲಲ್ಲಿ ಮುಳುಗಿದ್ದಾರೆ.
ಚಂಡಮಾರುತವು ದಕ್ಷಿಣ ರಷ್ಯಾದ ಅನೇಕ ಭಾಗಗಳ ಮೇಲೂ ಪರಿಣಾಮ ಬೀರುತ್ತಿದೆ. ಹಲವೆಡೆ ಮನೆಗಳ ಛಾವಣಿಗಳು ಹಾರಿ ಹೋಗಿವೆ. ಕಪ್ಪು ಸಮುದ್ರದಲ್ಲಿ ಸೃಷ್ಟಿಯಾಗಿರುವ ಈ ಭೀಕರ ಚಂಡಮಾರುತವು ಗಂಟೆಗೆ 144 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಕರಾವಳಿಯನ್ನು ದಾಟಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಪ್ಪು ಸಮುದ್ರದಲ್ಲಿನ ಚಂಡಮಾರುತದಿಂದಾಗಿ ರಷ್ಯಾ ಆಕ್ರಮಿತ ಕ್ರೈಮಿಯಾ ಸಂಕಷ್ಟಕ್ಕೆ ಸಿಲುಕಿದೆ. ದಕ್ಷಿಣ ರಷ್ಯಾದ ಸೋಚಿ ತೀರದಲ್ಲಿಯೂ ಬೃಹತ್ ಅಲೆಗಳು ಎದ್ದಿವೆ. ಅನಪಾ, ಕುಬನ್ ಮತ್ತು ಇತರ ಪ್ರದೇಶಗಳಲ್ಲಿ ಆಸ್ತಿ ಹಾನಿ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ಮಾಸ್ಕೋ ಆಕ್ರಮಿತ ಪ್ರದೇಶವಾದ ಉಕ್ರೇನ್ ಮತ್ತು ಕ್ರಿಮಿಯಾ ಸೇರಿದಂತೆ ರಷ್ಯಾದಲ್ಲಿ ಸುಮಾರು ಐದು ಲಕ್ಷ ಜನರು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್‌ನ ಹಲವು ಪಟ್ಟಣಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದಿಂದಾಗಿ ಕ್ರಿಮಿಯಾದ ಹಲವು ಭಾಗಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರತಿ ಗಂಟೆಗೆ 144 ಕಿಲೋಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸುತ್ತಿದೆ ಮತ್ತು ಇದು ಕಳೆದ 16 ವರ್ಷಗಳಲ್ಲಿ ಅತ್ಯಂತ ತೀವ್ರವಾದ ಚಂಡಮಾರುತವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತ ಅಪ್ಪಳಿಸಿದ್ದರಿಂದ ಸರ್ಕಾರಿ ಕಚೇರಿಗಳು, ಶಾಲೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸೆವಾಸ್ಟೊಪೋಲ್‌ನ ಬೃಹತ್ ಅಕ್ವೇರಿಯಂನಲ್ಲಿ ಪ್ರವಾಹದಿಂದಾಗಿ 800ಕ್ಕೂ ಹೆಚ್ಚು ಅಪರೂಪದ ಮೀನುಗಳು ಮತ್ತು ಇತರ ಜಲಚರ ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಪ್ರತಿಕೂಲ ಹವಾಮಾನದ ಕಾರಣ ನೊವೊರೊಸಿಸ್ಕ್ ಬಂದರಿನಲ್ಲಿ ತೈಲ ಲೋಡ್ ಅನ್ನು ನಿಲ್ಲಿಸಲಾಗಿದೆ.
ಚಂಡಮಾರುತವು ಜಾರ್ಜಿಯಾ ಮತ್ತು ಉಕ್ರೇನ್‌ನಲ್ಲೂ ಸಹ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ನೆಲಕ್ಕುರುಳಿರುವ ಮರಗಳಿಂದ ಸುಮಾರು ಒಂದೂವರೆ ಲಕ್ಷ ಮನೆಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿವೆ. ಇದರಿಂದ ಆ ಭಾಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಓದಿ: ಭಾರತದ ನೆರೆಹೊರೆಯಲ್ಲಿ ಅಲುಗಾಡಿದ ಭೂಮಿ: 3 ದೇಶಗಳ ಜನರ ನಿದ್ದೆಗೆಡಿಸಿದ ಕಂಪನ