ವಾಷಿಂಗ್ಟನ್ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಜೂನ್ 22ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅವರನ್ನು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆಹ್ವಾನಿಸಿದೆ.
ಈ ಕುರಿತು ಪತ್ರಿಕಾ ಬಿಡುಗಡೆ ಮಾಡಿರುವ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, ನಿಮ್ಮ ಭಾಷಣದ ಸಮಯದಲ್ಲಿ ಭಾರತದ ಭವಿಷ್ಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮತ್ತು ನಮ್ಮ ಎರಡೂ ದೇಶಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಲು ನಿಮಗೆ ಅವಕಾಶವಿದೆ ಎಂದು ತಿಳಿಸಿದೆ. ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಸೆನೆಟ್ ಬಹುಮತದ ನಾಯಕ ಚಕ್ ಶುಮರ್, ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಮತ್ತು ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಅವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 22 ರಂದು ಯುಎಸ್ಗೆ ಭೇಟಿ ನೀಡಲಿದ್ದಾರೆ. ಏಳು ವರ್ಷಗಳ ಹಿಂದೆ ಕಾಂಗ್ರೆಸ್‌ನ ಜಂಟಿ ಸಭೆಯನ್ನುದ್ದೇಶಿಸಿ ಮೋದಿ ಮಾಡಿದ ಐತಿಹಾಸಿಕ ಭಾಷಣವು ಶಾಶ್ವತ ಪರಿಣಾಮ ಬೀರಿದೆ. ಉಭಯ ರಾಷ್ಟ್ರಗಳ ನಡುವಿನ ಸ್ನೇಹವನ್ನು ಹೆಚ್ಚು ಗಟ್ಟಿಗೊಳಿಸಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅಲ್ಲದೇ, ಈ ಪತ್ರದಲ್ಲಿ ಪ್ರಧಾನಿ ಮೋದಿ ಹಿಂದಿನ ಭಾಷಣವನ್ನು ಉಲ್ಲೇಖಿಸಲಾಗಿದೆ. ನಮ್ಮ ಸಂಬಂಧವು ಮಹತ್ವದ ಭವಿಷ್ಯಕ್ಕಾಗಿ ಪ್ರಧಾನವಾಗಿದೆ. ಹಿಂದಿನ ಕಟ್ಟುಪಾಡುಗಳು ನಮ್ಮ ಹಿಂದೆ ಇವೆ ಮತ್ತು ಭವಿಷ್ಯದ ಅಡಿಪಾಯಗಳು ದೃಢವಾಗಿ ನೆಲೆಯೂರಿವೆ ಎಂದು ಸೇರಿಸಲಾಗಿದೆ. ಮತ್ತೊಮ್ಮೆ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ನಿರಂತರ ಸ್ನೇಹವನ್ನು ಆಚರಿಸಲು ಕಾಂಗ್ರೆಸ್ಗೆ ಜಂಟಿ ಸಭೆಗೆ ನೀವು ನಮ್ಮೊಂದಿಗೆ ಸೇರುವುದು ನಮಗೆ ಗೌರವ. ನಮ್ಮ ದೇಶಗಳಿಗೆ ಮತ್ತು ಜಗತ್ತಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಲಾಗಿದೆ.
ಆಹ್ವಾನ ಪಡೆದ 3ನೇ ನಾಯಕ ಮೋದಿ: ಏತನ್ಮಧ್ಯೆ, ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯು ಅಮೆರಿಕ ಮತ್ತು ಭಾರತದ ನಡುವಿನ ಆಳವಾದ ನಿಕಟ ಪಾಲುದಾರಿಕೆಯನ್ನು ಪುನರುಚ್ಚರಿಸಲು ಒಂದು ಅವಕಾಶವಾಗಿದೆ ಎಂದು ಶ್ವೇತಭವನ ಹೇಳಿದೆ. ಪ್ರಧಾನಿ ಮೋದಿಯವರ ಭೇಟಿಯು ಅಮೆರಿಕ, ಅಮೆರಿಕನ್ನರು ಮತ್ತು ಭಾರತೀಯರನ್ನು ಒಟ್ಟಿಗೆ ಜೋಡಿಸುತ್ತದೆ. ಹಾಗಾಗಿ ಇದು ಯುಎಸ್ ಅಧ್ಯಕ್ಷರಿಗೆ ಬಹಳ ಮುಖ್ಯವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಮೋದಿ ಪ್ರವಾಸದ ಕುರಿತು ಹೇಳಿದ್ದಾರೆ.
ಜೂನ್ 22ರಂದು ನಡೆಯಲಿರುವ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಎದುರು ನೋಡುತ್ತಿದ್ದಾರೆ. ರಕ್ಷಣೆ, ಶುದ್ಧ ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ತಂತ್ರಜ್ಞಾನ ಪಾಲುದಾರಿಕೆ ಮತ್ತು ಹಂಚಿಕೆಯ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಕಾರ್ಯದರ್ಶಿ ಪಿಯರ್ ತಿಳಿಸಿದ್ದಾರೆ.
ಇತಿಹಾಸದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನವನ್ನು ಪಡೆದ ಪ್ರಧಾನಿ ಮೋದಿ ವಿಶ್ವದ ಮೂರನೇ ನಾಯಕರಾಗಿದ್ದಾರೆ. ಈ ಹಿಂದೆ ವಿಶ್ವ ಯುದ್ಧದ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಮತ್ತು ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ ಈ ಸದನಗಳಲ್ಲಿ ಭಾಷಣ ಮಾಡಲು ಆಹ್ವಾನ ಸಿಕ್ಕಿತ್ತು.
ಇದನ್ನೂ ಓದಿ: ಏರ್‌ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ಮುಗ್ಗರಿಸಿ ಬಿದ್ದ ಅಮೆರಿಕ ಅಧ್ಯಕ್ಷ ಬೈಡನ್