ಬರ್ಲಿನ್ (ಜರ್ಮನಿ) : ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಯುರೋಪ್ ಭೇಟಿ ಹಿನ್ನೆಲೆ ಇಂದು ಜರ್ಮನಿಯ ರಾಜಧಾನಿ ಬರ್ಲಿನ್ ತಲುಪಿದ್ದಾರೆ. ಇಲ್ಲಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾಗಿ ಇಬ್ಬರೂ ನಾಯಕರು ಬರ್ಲಿನ್‌ನಲ್ಲಿ ನಡೆದ ಭಾರತ-ಜರ್ಮನಿ ಐಜಿಸಿ ಸಭೆಯಲ್ಲಿ ಭಾಗವಹಿಸಿದ್ದಾರೆ.
ಇದಕ್ಕೂ ಮುನ್ನ ಭಾರತೀಯ ಸಮುದಾಯದವರು ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಬರ್ಲಿನ್‌ನಿಂದ ಪ್ರಧಾನಿ ಮೋದಿ ಮೇ 3 ರಂದು ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್ ತಲುಪಲಿದ್ದಾರೆ.
ಈ ವೇಳೆ ಮಾತನಾಡಿರುವ ಮೋದಿ, ನಮ್ಮ ಕೊನೆಯ ಐಜಿಸಿ 2019 ಸಭೆಯಿಂದ ಜಗತ್ತಿನಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ. ಕೊರೊನಾ ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇತ್ತೀಚಿನ ಭೌಗೋಳಿಕ ರಾಜಕೀಯ ಘಟನೆಗಳು ವಿಶ್ವ ಶಾಂತಿ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿದೆ ಎಂದಿದ್ದಾರೆ.
ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. 2022ರಲ್ಲಿ ಇದು ನನ್ನ ಮೊದಲ ವಿದೇಶಿ ಪ್ರವಾಸ. ಭಾರತ ಯುರೋಪ್ ಗೆ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದ ಅವರು, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಉಲ್ಲೇಖ ಮಾಡಿ, ಬಿಕ್ಕಟ್ಟಿನ ಆರಂಭದಿಂದಲೂ ನಾವು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದೇವೆ ಮತ್ತು ವಿವಾದವನ್ನು ಪರಿಹರಿಸಲು ಮಾತುಕತೆಯೇ ಏಕೈಕ ಮಾರ್ಗವಾಗಿದೆ ಎಂದು ಒತ್ತಿ ಹೇಳಿದ್ದೇವೆ. ಈ ಯುದ್ಧದಲ್ಲಿ ಎಲ್ಲರೂ ತೊಂದರೆ ಅನುಭವಿಸುತ್ತಾರೆ. ಅದಕ್ಕಾಗಿಯೇ ನಾವು ಶಾಂತಿಯ ಪರವಾಗಿದ್ದೇವೆ. ಉಕ್ರೇನ್ ಬಿಕ್ಕಟ್ಟಿನ ಪ್ರಕ್ಷುಬ್ಧತೆ ತೈಲ ಬೆಲೆ ಗಗನಕ್ಕೇರುತ್ತಿದೆ. ವಿಶ್ವದಲ್ಲಿ ರಸಗೊಬ್ಬರದ ಕೊರತೆಯಿದೆ. ಇದು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾವು ನಮ್ಮ ಕಡೆಯಿಂದ ಉಕ್ರೇನ್‌ಗೆ ಮಾನವೀಯ ಸಹಕಾರವನ್ನು ನೀಡಿದ್ದೇವೆ ಎಂದರು.
ಮೋದಿ ಅವರು ನಾಳೆ ಡೆನ್ಮಾರ್ಕ್‌ಗೆ ಭೇಟಿ ನೀಡಲಿದ್ದು, ನಾರ್ಡಿಕ್ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬುಧವಾರ ಪ್ಯಾರಿಸ್‌ನಲ್ಲಿ ತಂಗಲಿದ್ದು, ಹೊಸದಾಗಿ ಮರು ಆಯ್ಕೆಯಾದ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ.