ಪ್ಯಾರಿಸ್, ಫ್ರೆಂಚ್: ಮಾನವ ಕಳ್ಳಸಾಗಣೆ ಆರೋಪದ ಮೇಲೆ ಫ್ರಾನ್ಸ್ ಅಧಿಕಾರಿಗಳು 303 ಭಾರತೀಯ ಪ್ರಯಾಣಿಕರಿದ್ದ ವಿಮಾನವನ್ನು ವಶಕ್ಕೆ ಪಡೆದಿದ್ದರು. ಆದರೆ ಈಗ ಸಮಸ್ಯೆ ಬಗೆಹರಿದಿದ್ದು, ಮೂರು ದಿನಗಳ ನಿರ್ಬಂಧನದ ಬಳಿಕ ಇಂದು ಬೆಳಗ್ಗೆ ವಿಮಾನವು ಮತ್ತೆ ಟೇಕ್ ಆಫ್ ಆಗಲಿದೆ. ಆದರೆ, ಈ ವಿಮಾನ ನಿಗದಿತ ವೇಳಾಪಟ್ಟಿಯಂತೆ ನಿಕರಾಗುವಾದತ್ತ ಪ್ರಯಾಣ ಬೆಳಸುತ್ತೋ ಅಥವಾ ವಾಪಸ್ ಡೈವರ್ಟ್ ಮಾಡಿ ದುಬೈ ತಲುಪುತ್ತೋ ಅಥವಾ ಈ ಎರಡರ ಬದಲು ಭಾರತಕ್ಕೆ ಬರುವುದೋ ಎಂಬುದು ಇನ್ನು ಬಹಿರಂಗವಾಗಿಲ್ಲ. ಇವರೆಲ್ಲರೂ ಗುರುವಾರ ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್ ವಿಮಾನದಲ್ಲಿ ದುಬೈನಿಂದ ನಿಕರಾಗುವಾಗೆ ತೆರಳುವ ವೇಳೆ ಫ್ರಾನ್ಸ್‌ನಲ್ಲಿ ಸಿಲುಕಿಕೊಂಡರು ಎಂದು ತಿಳಿದು ಬಂದಿದೆ.
ಇಂಧನಕ್ಕಾಗಿ ವಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ನಿಲ್ಲಿಸಿದಾಗ ಫ್ರೆಂಚ್ ಅಧಿಕಾರಿಗಳು ಅದನ್ನು ಕಸ್ಟಡಿಗೆ ತೆಗೆದುಕೊಂಡರು. ಇದಕ್ಕೆ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸ್ಪಂದಿಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಫ್ರೆಂಚ್ ನಿಯಮಗಳ ಪ್ರಕಾರ, ಘಟನೆಯ ವಿಚಾರಣೆ ಭಾನುವಾರ ಪ್ರಾರಂಭವಾಯಿತು.
ಪ್ಯಾರಿಸ್‌ನಿಂದ 150 ಕಿಮೀ ದೂರದಲ್ಲಿರುವ ಮತ್ತು ಸೀಮಿತ ವಿಮಾನ ಸಂಚಾರ ಹೊಂದಿರುವ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಪ್ರಯೋಗಕ್ಕಾಗಿ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದರು. ನ್ಯಾಯಾಲಯದ ಸಿಬ್ಬಂದಿ, ಸಾಕಷ್ಟು ಸಂಖ್ಯೆಯ ಭಾಷಾಂತರಕಾರರು ಮತ್ತು ವಕೀಲರು ಲಭ್ಯವಾಗುವಂತೆ ಮಾಡಲಾಗಿತ್ತು. ನಾಲ್ವರು ನ್ಯಾಯಾಧೀಶರ ಸಮಿತಿಯ ಸಾರ್ವಜನಿಕ ವಿಚಾರಣೆಯು ಭಾನುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಯಿತು. ಆ ಬಳಿಕ ವಿಮಾನ ಟೇಕಾಫ್ಗೆ ಅನುಮತಿ ನೀಡಿದಾಗ ತನಿಖಾ ಪ್ರಕ್ರಿಯೆಯಲ್ಲಿ ದೋಷಗಳಿವೆ ಎಂದು ನ್ಯಾಯಾಧೀಶರು ವಿಚಾರಣೆ ರದ್ದುಗೊಳಿಸಿದರು. ಪ್ರಯಾಣಿಕರಲ್ಲಿ 11 ಅಪ್ರಾಪ್ತರು ಇದ್ದರು. 10 ಮಂದಿ ಫ್ರಾನ್ಸ್‌ನಲ್ಲಿ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿದೆ.
ಹಿಂದಿ ಮತ್ತು ತಮಿಳು ಮಾತನಾಡುತ್ತಿದ್ದರು: ಫ್ರೆಂಚ್ ಮಾಧ್ಯಮ ವರದಿಗಳ ಪ್ರಕಾರ, ವಿಮಾನದ ಕೆಲವು ಪ್ರಯಾಣಿಕರು ತಮ್ಮ ಸಂಬಂಧಿಕರೊಂದಿಗೆ ಹಿಂದಿ ಮತ್ತು ತಮಿಳಿನಲ್ಲಿ ಫೋನ್‌ಗಳಲ್ಲಿ ಮಾತನಾಡಿದ್ದಾರೆ. ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್‌ನ ವಕೀಲರು ಅವರು ಕಂಪನಿಯ ಕ್ಲೈಂಟ್‌ಗಾಗಿ ವಿಮಾನವನ್ನು ನಿರ್ವಹಿಸಿದ್ದಾರೆ ಮತ್ತು ಮಾನವ ಕಳ್ಳಸಾಗಣೆ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫ್ರಾನ್ಸ್‌ನ ಕಾನೂನುಗಳ ಪ್ರಕಾರ, ವಿದೇಶಿಯರನ್ನು ಫ್ರೆಂಚ್ ಗಡಿ ಪೊಲೀಸರು ನಾಲ್ಕು ದಿನಗಳವರೆಗೆ ಬಂಧಿಸಬಹುದು. ನ್ಯಾಯಾಧೀಶರು ಅವಕಾಶ ನೀಡಿದರೆ ಇನ್ನೂ ನಾಲ್ಕು ದಿನ ವಿಸ್ತರಿಸಬಹುದು. ಅನಿವಾರ್ಯ ಸಂದರ್ಭಗಳಲ್ಲಿ ವಿದೇಶಿಯರನ್ನು ಗರಿಷ್ಠ 26 ದಿನಗಳವರೆಗೆ ಮಾತ್ರ ಅವರನ್ನು ವಶದಲ್ಲಿಟ್ಟಕೊಳ್ಳಲು ಅವಕಾಶ ಇದೆ. ಅದಕ್ಕಿಂತ ಹೆಚ್ಚು ದಿನಗಳಾದರೆ ಅವರನ್ನ ಬಂಧಿಸಲಾಗದು. ಮಾನವ ಕಳ್ಳಸಾಗಣೆ ಆರೋಪ ಸಾಬೀತಾದರೆ 20 ವರ್ಷಗಳ ಕ್ರಿಮಿನಲ್ ಜೈಲು ಶಿಕ್ಷೆ ಮತ್ತು 30 ಲಕ್ಷ ಯುರೋ (ರೂ. 27.5 ಕೋಟಿ) ದಂಡ ವಿಧಿಸಲಾಗುತ್ತದೆ.
ಓದಿ: ಮಾನವ ಕಳ್ಳಸಾಗಣೆ ಶಂಕೆ: 303 ಭಾರತೀಯರ ಹೊತ್ತೊಯ್ಯುತ್ತಿದ್ದ ವಿಮಾನ ಫ್ರಾನ್ಸ್‌ನಲ್ಲಿ ಲ್ಯಾಂಡ್