ಟೆಲ್ ಅವೀವ್ (ಇಸ್ರೇಲ್) : ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಲು ಹಮಾಸ ಉಗ್ರರಿಗೆ ಇರಾನ್ ಮಿಲಿಟರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಭಯೋತ್ಪಾದಕ ಗುಂಪುಗಳಾದ ಹಮಾಸ್ ಮತ್ತು ಹಿಜ್ಬುಲ್ಲಾದ ಹಿರಿಯ ಸದಸ್ಯರ ಪ್ರಕಾರ, ಕಳೆದ ಸೋಮವಾರ ಬೈರುತ್‌ನಲ್ಲಿ ನಡೆದ ಸಭೆಯಲ್ಲಿ ಇರಾನ್ ದಾಳಿಗೆ ಅನುಮೋದನೆ ನೀಡಿತ್ತು ಎಂದು ಡಬ್ಲ್ಯುಎಸ್ಜೆ ವರದಿ ತಿಳಿಸಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಅಧಿಕಾರಿಗಳು ಆಗಸ್ಟ್ನಿಂದ ಹಮಾಸ್ನೊಂದಿಗೆ ಸೇರಿಕೊಂಡು ವಾಯು, ಭೂಮಿ ಮತ್ತು ಸಮುದ್ರ ಮಾರ್ಗಗಳಿಂದ ಇಸ್ರೇಲ್ ಮೇಲೆ ಆಕ್ರಮಣಗಳನ್ನು ರೂಪಿಸಲು ಕೆಲಸ ಮಾಡಿದ್ದರು. 1973 ರಲ್ಲಿ ಯೋಮ್ ಕಿಪ್ಪೂರ್ ಯುದ್ಧದ ನಂತರ ಇಸ್ರೇಲ್ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಬೈರುತ್‌ನಲ್ಲಿ ನಡೆದ ಹಲವಾರು ಸಭೆಗಳಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳನ್ನು ಕರಾರುವಾಕ್ಕಾಗಿ ರೂಪಿಸಲಾಗಿತ್ತು. ಐಆರ್ಜಿಸಿ ಅಧಿಕಾರಿಗಳು ಮತ್ತು ಹಮಾಸ್ ಮತ್ತು ಹಿಜ್ಬುಲ್ಲಾ ಸೇರಿದಂತೆ ಇರಾನ್ ಬೆಂಬಲಿತ ನಾಲ್ಕು ಭಯೋತ್ಪಾದಕ ಗುಂಪುಗಳ ಪ್ರತಿನಿಧಿಗಳು ಈ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿದ ಮೂಲಗಳು ತಿಳಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರವನ್ನು ಸುತ್ತುವರೆದಿರುವ ಆಂತರಿಕ ರಾಜಕೀಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ನಡೆಯುವಂತೆ ಈ ದಾಳಿಯನ್ನು ಯೋಜಿಸಲಾಗಿತ್ತು. ಇದಲ್ಲದೆ, ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಉದ್ದೇಶದಿಂದ ಯುಎಸ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಗಳನ್ನು ಹಳಿ ತಪ್ಪಿಸಲು ಈ ದಾಳಿಯನ್ನು ಯೋಜಿಸಲಾಗಿದೆ. ಇಸ್ರೇಲ್ ಮತ್ತು ಸೌದಿ ಅರೇಬಿಯಾ ಬಾಂಧವ್ಯ ವೃದ್ಧಿಯನ್ನು ಇರಾನ್ ತನಗೆ ಅಪಾಯವೆಂದು ಪರಿಗಣಿಸುತ್ತದೆ ಎಂದು ಹಮಾಸ್ ಮತ್ತು ಹಿಜ್ಬುಲ್ಲಾದ ಹಿರಿಯ ಸದಸ್ಯರು ತಿಳಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಯುರೋಪಿಯನ್ ಅಧಿಕಾರಿ ಮತ್ತು ಸಿರಿಯನ್ ಸರ್ಕಾರದ ಸಲಹೆಗಾರರೊಬ್ಬರು ಇಸ್ರೇಲ್ ಮೇಲಿನ ದಾಳಿಯಲ್ಲಿ ಇರಾನ್ ಭಾಗಿಯಾಗಿರುವ ಬಗ್ಗೆ ಇದೇ ರೀತಿಯ ವಿವರಣೆಯನ್ನು ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಇರಾನ್ ಬೆಂಬಲದೊಂದಿಗೆ ಹಮಾಸ್ ಬಲಗೊಂಡಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಭಾನುವಾರ ಹೇಳಿದ್ದಾರೆ. ಆದಾಗ್ಯೂ, ಇಸ್ರೇಲ್ ಮೇಲಿನ ಈಗಿನ ಹಮಾಸ್ ದಾಳಿಯಲ್ಲಿ ಇರಾನ್ ಭಾಗಿಯಾಗಿರುವ ಬಗ್ಗೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ರಾಕೆಟ್ಗಳ ಸುರಿಮಳೆಗೈದಿದೆ. ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖಿಸಿದ ಇಸ್ರೇಲಿ ಸ್ಥಳೀಯ ಮಾಧ್ಯಮಗಳ ಪ್ರಕಾರ, ಶನಿವಾರದ ದಾಳಿಯ ನಂತರ 700 ಕ್ಕೂ ಹೆಚ್ಚು ಇಸ್ರೇಲಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್ ಸರ್ಕಾರದ ಪ್ರಕಾರ, ದಾಳಿಯಲ್ಲಿ 2000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಇಸ್ರೇಲ್ - ಗಾಜಾ ಸಮರದ ಎಫೆಕ್ಟ್; ಕಚ್ಚಾ ತೈಲ ಬೆಲೆ ಏರಿಕೆ