ಟೋಕಿಯೊ (ಜಪಾನ್): ವಿನಾಶವಾಗಿರುವ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಎರಡನೇ ಹಂತದ ಕಾರ್ಯಾಚರಣೆಯನ್ನು ಜಪಾನ್ ಗುರುವಾರ ಪ್ರಾರಂಭಿಸಿದೆ. ಎರಡನೇ ಹಂತದ ಡಿಸ್ಚಾರ್ಜ್ ಬೆಳಗ್ಗೆ 10.30 ರ ಸುಮಾರಿಗೆ (ಸ್ಥಳೀಯ ಸಮಯ) ಪ್ರಾರಂಭವಾಗಿದೆ ಮತ್ತು ಇದು ಅಕ್ಟೋಬರ್ 23 ರವರೆಗೆ ಮುಂದುವರಿಯಲಿದೆ.
ಎರಡನೇ ಹಂತದಲ್ಲಿ ಅಕ್ಟೋಬರ್ 23ರವರೆಗೆ ಒಟ್ಟು 7,800 ಟನ್ ಸಂಸ್ಕರಿಸಿದ ಅಣುತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಾಗುವುದು. ಇದು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾದ ನೀರಿನ ಮೊತ್ತಕ್ಕೆ ಸಮನಾಗಿದೆ. ಪ್ರತಿದಿನ ಸುಮಾರು 460 ಟನ್ ನೀರನ್ನು ಸಮುದ್ರಕ್ಕೆ ಹರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಏನಿದು ಕಸ್ಟಮ್ ಶುದ್ದೀಕರಣ ವ್ಯವಸ್ಥೆ?: ಮಾರ್ಚ್ 2011 ರಲ್ಲಿ ಫುಕುಶಿಮಾ ಅಣುಸ್ಥಾವರ ಹಾನಿಗೀಡಾಗಿತ್ತು. ಅಂದಿನಿಂದ ಅಡ್ವಾನ್ಸ್ಡ್ ಲಿಕ್ವಿಡ್ ಪ್ರೊಸೆಸಿಂಗ್ ಸಿಸ್ಟಮ್ (ಎಎಲ್ಪಿಎಸ್) ಎಂದು ಕರೆಯಲ್ಪಡುವ ಕಸ್ಟಮ್ ಶುದ್ಧೀಕರಣ ವ್ಯವಸ್ಥೆಯ ಮೂಲಕ ಅಣುತ್ಯಾಜ್ಯ ನೀರನ್ನು ಸಂಸ್ಕರಿಸಿದ ನಂತರ ಅದನ್ನು ಟ್ಯಾಂಕ್ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಫುಕುಶಿಮಾ ಸ್ಥಾವರವನ್ನು ನಿರ್ವಹಿಸುವ ಹೊಣೆ ಹೊತ್ತಿರುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಈಗ ಸಮುದ್ರದೊಳಗೆ 1 ಕಿಮೀ ಉದ್ದದ ಪೈಪ್ಗಳ ಮೂಲಕ ಈ ನೀರನ್ನು ಬಿಡುಗಡೆ ಮಾಡುತ್ತಿದೆ.
ಎಎಲ್ಪಿಎಸ್ ವ್ಯವಸ್ಥೆಯು ಟ್ರೈಟಿಯಂ ಹೊರತುಪಡಿಸಿ 62 ರೀತಿಯ ವಿಕಿರಣಶೀಲ ವಸ್ತುಗಳನ್ನು ತೆಗೆದುಹಾಕಬಹುದು. ಇದರ ಮೂಲಕ ಸಂಸ್ಕರಿಸಿದ ನೀರನ್ನು ಸಮುದ್ರದ ನೀರಿನೊಂದಿಗೆ ಸೇರಿಸಿ ದುರ್ಬಲಗೊಳಿಸುವ ಮೂಲಕ ಟ್ರೈಟಿಯಂ ಮಟ್ಟವನ್ನು ಅಂತಾರಾಷ್ಟ್ರೀಯ ಸುರಕ್ಷತಾ ಮಟ್ಟಕ್ಕೆ ಇಳಿಸಬಹುದು.
ಜಪಾನ್ ಸರ್ಕಾರ, ಫುಕುಶಿಮಾ ಪ್ರಿಫೆಕ್ಚುರಲ್ ಸರ್ಕಾರ ಮತ್ತು ಟೋಕಿಯೊ ಎಲೆಕ್ಟ್ರಿಕ್ ಕಂಪನಿಗಳು ಮೊದಲ ಹಂತದ ವಿಸರ್ಜನೆಯ ಪ್ರಾರಂಭದಿಂದಲೂ ಪರಮಾಣು ವಿದ್ಯುತ್ ಸ್ಥಾವರದ ಸುತ್ತಲಿನ ಸಮುದ್ರದ ನೀರು ಮತ್ತು ಮೀನುಗಳಲ್ಲಿ ಟ್ರೈಟಿಯಂ ಸಾಂದ್ರತೆಯನ್ನು ನಿಯಮಿತವಾಗಿ ವಿಶ್ಲೇಷಿಸುತ್ತಿವೆ. ಆದರೆ ಈವರೆಗೂ ಯಾವುದೇ ಅಪಾಯಕಾರಿ ಸೂಚನೆಗಳು ಕಂಡು ಬಂದಿಲ್ಲ.
ಬುಧವಾರ ಟೋಕಿಯೊ ಎಲೆಕ್ಟ್ರಿಕ್ ಕಂಪನಿ ಮತ್ತೊಮ್ಮೆ ಸಂಸ್ಕರಿಸಿದ ಮತ್ತು ದುರ್ಬಲಗೊಳಿಸಿದ ತ್ಯಾಜ್ಯನೀರಿನಲ್ಲಿ ಟ್ರೈಟಿಯಂ ಸಾಂದ್ರತೆಯನ್ನು ಅಳೆದಿತ್ತು ಮತ್ತು ಅದು ಪ್ರತಿ ಲೀಟರ್ಗೆ 87 ಬೆಕ್ವೆರೆಲ್ಗಳವರೆಗೆ ಇದೆ ಎಂದು ಕಂಡು ಬಂದಿದೆ. ಇದು ನಿರ್ದಿಷ್ಟ ಡಿಸ್ಚಾರ್ಜ್ ಮಾನದಂಡಕ್ಕಿಂತ ಕಡಿಮೆಯಾಗಿದೆ. ಪರಮಾಣು ಸ್ಥಾವರದಲ್ಲಿ ಸಂಗ್ರಹವಾಗಿರುವ ಒಂದು ಮಿಲಿಯನ್ ಟನ್ ಗಿಂತ ಹೆಚ್ಚು ನೀರನ್ನು ಮುಂದಿನ 30 ವರ್ಷಗಳಲ್ಲಿ ಹೊರಹಾಕುವ ಯೋಜನೆ ಜಪಾನ್ ಸರ್ಕಾರದ್ದಾಗಿದೆ.
ಇದನ್ನೂ ಓದಿ : ಫೋರ್ಬ್ಸ್ ಅಮೆರಿಕ ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮಸ್ಕ್, 2ನೇ ಸ್ಥಾನದಲ್ಲಿ ಬೆಜೋಸ್