ಗಾಜಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ನಾಲ್ಕು ದಿನಗಳ ತಾತ್ಕಾಲಿಕ ಕದನ ವಿರಾಮ ಇಂದು ಕೊನೆಗೊಳ್ಳಲಿದೆ. ಮೂರನೇ ಹಂತದ ಭಾಗವಾಗಿ ಹಮಾಸ್ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ರೆಡ್ ಕ್ರಾಸ್ ಸಂಸ್ಥೆಗೆ ಈಗಾಗಲೇ ಹಸ್ತಾಂತರಿಸಿದೆ. ಇವರಲ್ಲಿ 14 ಮಂದಿ ಇಸ್ರೇಲಿ ಪ್ರಜೆಗಳು ಮತ್ತು ಮೂವರು ವಿದೇಶಿಯರಿದ್ದಾರೆ. 14 ಇಸ್ರೇಲಿ ಪ್ರಜೆಗಳಲ್ಲಿ 9 ಮಂದಿ ಮಕ್ಕಳಾಗಿದ್ದರೆ, ವಿದೇಶಿಯರಲ್ಲಿ ನಾಲ್ಕು ವರ್ಷದ ಅಮೆರಿಕನ್ ಮಗು ಸಹ ಇದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ 39 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಇದುವರೆಗೆ ಹಮಾಸ್ 58 ಜನರನ್ನು ಮತ್ತು ಇಸ್ರೇಲ್ 114 ಜನರನ್ನು ಒಪ್ಪಂದದ ಭಾಗವಾಗಿ ರಿಲೀಸ್ ಮಾಡಿದೆ.
ಸ್ಥಳದಲ್ಲಿ ಕದನ ವಿರಾಮದಿಂದಾಗಿ ಗಾಜಾಕ್ಕೆ ಸುಲಭವಾಗಿ ಮಾನವೀಯ ನೆರವು ತಲುಪುತ್ತಿವೆ. 120 ಟ್ರಕ್‌ಗಳು ಗಾಜಾ ತೆರಳಿವೆ ಎಂದು ಈಜಿಪ್ಟ್ ಹೇಳಿದೆ. ಉಭಯ ಪಕ್ಷಗಳ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಳ್ಳುತ್ತಿದ್ದಂತೆ ಒಪ್ಪಂದವನ್ನು ವಿಸ್ತರಿಸಲಾಗುತ್ತದೆಯೇ/ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ಕದನ ವಿರಾಮ ವಿಸ್ತರಣೆ ಕುರಿತು ಇದುವರೆಗೆ ಯಾವುದೇ ಘೋಷಣೆಯಾಗಿಲ್ಲ. ಗಾಜಾ ಪಟ್ಟಿಗೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಯೊಬ್ಬ ಒತ್ತೆಯಾಳನ್ನೂ ಮುಕ್ತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹಮಾಸ್‌ನ ಅಂತ್ಯ, ಒತ್ತೆಯಾಳುಗಳ ಬಿಡುಗಡೆ ಮತ್ತು ಭವಿಷ್ಯದ ಬೆದರಿಕೆಗಳನ್ನು ತಡೆಗಟ್ಟುವುದು ಮೂರು ಪುರಮುಖ ಗುರಿಗಳಾಗಿವೆ. ಈ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲಾ ಶಕ್ತಿಯನ್ನು ನಾವು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಕ್ರಿಯಿಸಿದ ಯುಎಸ್ ಅಧ್ಯಕ್ಷ ಜೋ ಬೈಡೆನ್, ಕದನ ವಿರಾಮ ಒಪ್ಪಂದವನ್ನು ವಿಸ್ತರಿಸುವ ಭರವಸೆ ವ್ಯಕ್ತಪಡಿಸಿದರು. ಇಸ್ರೇಲ್ ಮತ್ತು ಪ್ಯಾಲೆಸ್ತ್ಟೈನ್ ಜನರು ಶಾಂತಿಯಿಂದ ಬದುಕಲು 'ಎರಡು ರಾಷ್ಟ್ರಗಳ ಪರಿಹಾರ' ಒಂದೇ ಮಾರ್ಗ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೆ ಯುದ್ಧ-ಇಸ್ರೇಲ್: ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಕೊನೆಗೊಂಡ ಬಳಿಕ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಮತ್ತಷ್ಟು ಪ್ರಬಲವಾಗಿ ಹೋರಾಟ ಆರಂಭಿಸಲಿದೆ ಎಂದು ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಸೈನಿಕರಿಗೆ ಬರೆದ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ. "ಐಡಿಎಫ್ ತನ್ನ ಸಿದ್ಧಾಂತಗಳನ್ನು ಪಾಲಿಸುತ್ತಾ ಅದೇ ಸಮಯದಲ್ಲಿ ನಮ್ಮ ಜನರ ಜೀವಗಳನ್ನು ರಕ್ಷಿಸಲು ತೀವ್ರವಾಗಿ ಹೋರಾಡಲಿದೆ. ಈ ಕದನ ವಿರಾಮದ ಸಮಯದಲ್ಲಿ ಒತ್ತೆಯಾಳಾಗಿರುವ ಮಕ್ಕಳು ಮತ್ತು ತಾಯಂದಿರ ಬಿಡುಗಡೆಗಾಗಿ ಅವಕಾಶ ಮಾಡಿದ್ದೇವೆ" ಎಂದು ಹಾಲೆವಿ ಹೇಳಿದರು.
ಇದನ್ನೂ ಓದಿ: ಇಸ್ರೇಲ್ ಪರ ಗೂಢಚಾರಿಕೆ ಆರೋಪ; ವೆಸ್ಟ್ಬ್ಯಾಂಕ್ನಲ್ಲಿ ಇಬ್ಬರು ಶಂಕಿತರ ಕೊಲೆ