ಇಸ್ಲಾಮಾಬಾದ್ : ನಾಲ್ಕು ತಿಂಗಳ ಹಿಂದೆ ಅಪಹರಣಕ್ಕೀಡಾಗಿದ್ದ ಪಾಕಿಸ್ತಾನದ ಪ್ರಮುಖ ಪತ್ರಕರ್ತ ಮತ್ತು ನಿರೂಪಕ ಇಮ್ರಾನ್ ರಿಯಾಜ್ ಖಾನ್ ಅವರನ್ನು ಕೊನೆಗೂ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಇಮ್ರಾನ್ ರಿಯಾಜ್ ಖಾನ್ ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆಯ ವಿರುದ್ಧ ತಮ್ಮ ಬಹಿರಂಗ ನಿಲುವು ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅಪಹರಣಕ್ಕೀಡಾಗಿದ್ದ ಅವರು ಸೋಮವಾರ ಕೊನೆಗೂ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ರಿಯಾಜ್ ಖಾನ್ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂಬ ವರದಿಗಳನ್ನು ಸಿಯಾಲ್ಕೋಟ್ ಪೊಲೀಸರು ದೃಢಪಡಿಸಿದ್ದಾರೆ. "ಪತ್ರಕರ್ತ ಮತ್ತು ನಿರೂಪಕ ಇಮ್ರಾನ್ ರಿಯಾಜ್ ಖಾನ್ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈಗ ಅವರು ಈಗ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ. ಇಮ್ರಾನ್ ರಿಯಾಜ್ ಖಾನ್ ಸುರಕ್ಷಿತವಾಗಿ ತಮ್ಮ ಕುಟುಂಬಕ್ಕೆ ಮರಳಿದ್ದಾರೆ ಎಂಬ ಸುದ್ದಿಯನ್ನು ಅವರ ವಕೀಲ ಅಶ್ಫಾಕ್ ಕೂಡ ದೃಢಪಡಿಸಿದ್ದಾರೆ.
"ದೇವರ ವಿಶೇಷ ಆಶೀರ್ವಾದ, ಕೃಪೆ ಮತ್ತು ಕರುಣೆಯಿಂದ ನಮ್ಮ ರಾಜಕುಮಾರನನ್ನು ಮರಳಿ ಕರೆತಂದಿದ್ದೇವೆ. ದುರ್ಬಲ ನ್ಯಾಯಾಂಗ ಮತ್ತು ಕಾನೂನು ಅವ್ಯವಸ್ಥೆಯಿಂದ ಕೂಡಿದ ಸಂವಿಧಾನದ ಪ್ರಸ್ತುತ ಸ್ಥಿತಿ ಸೇರಿದಂತೆ ಅನೇಕ ತೊಂದರೆಗಳಿಂದಾಗಿ ಅವರ ಬಿಡುಗಡೆ ಸಾಕಷ್ಟು ವಿಳಂಬವಾಯಿತು" ಎಂದು ಅವರು ಹೇಳಿದರು.
ಖಾನ್ ಅವರ ವಾಪಸಾತಿಯು ಅವರ ಕುಟುಂಬ, ನಾಗರಿಕ ಸಮಾಜದ ಬೆಂಬಲಿಗರಿಗೆ ಮತ್ತು ಪಾಕಿಸ್ತಾನದ ಪತ್ರಕರ್ತ ಸಮುದಾಯಕ್ಕೆ ನೆಮ್ಮದಿಯ ನಿಟ್ಟುಸಿರು ತಂದಿದೆ. ಇಮ್ರಾನ್ ರಿಯಾಜ್ ಖಾನ್ ತಮ್ಮ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮೇ 11 ರಂದು ಬಿಡುಗಡೆಯಾದ ನಂತರ ಅವರನ್ನು ಅಪರಿಚಿತ ಅಪಹರಣಕಾರರು ಮೇ 15 ರಂದು ಅಪಹರಿಸಿದ್ದರು. ಅಂದಿನಿಂದ ಅವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿರಲಿಲ್ಲ.
ತಮ್ಮ ಟಿವಿ ಕಾರ್ಯಕ್ರಮಗಳು ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ತಾವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕಟ್ಟಾ ಬೆಂಬಲಿಗರಾಗಿ ರಿಯಾಜ್ ಖಾನ್ ಗುರುತಿಸಿಕೊಂಡಿದ್ದರು. ಏಪ್ರಿಲ್ 2022 ರಲ್ಲಿ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಹೊರಹಾಕಿದ ನಂತರ, ಇಮ್ರಾನ್ ರಿಯಾಜ್ ಖಾನ್ ಮಾಜಿ ಪ್ರಧಾನಿಯ ಮುಂಚೂಣಿ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಇಮ್ರಾನ್ ಖಾನ್ ಅವರ ವಿರೋಧಿ ಮೈತ್ರಿ ಪಕ್ಷಗಳನ್ನು ದೇಶದ್ರೋಹಿಗಳು, ಲೂಟಿಕೋರರು ಮತ್ತು ಭ್ರಷ್ಟರು ಎಂದು ಜರಿದಿದ್ದರು.
ಇದನ್ನೂ ಓದಿ : 'Elon Musk' ಜೀವನಚರಿತ್ರೆ ಪುಸ್ತಕ ಬಿಡುಗಡೆ; ಮಸ್ಕ್ ಜೀವನದ ರೋಚಕ ಸಂಗತಿಗಳು ಬಹಿರಂಗ!