ಕ್ವೆಟ್ಟಾ (ಪಾಕಿಸ್ತಾನ): ಪಾಕಿಸ್ತಾನದ ಗಡಿಯಲ್ಲಿ ಭಾನುವಾರ ಆಫ್ಘನ್ನ ತಾಲಿಬಾನ್ ಪಡೆ ಶೆಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏಳು ಜನ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಮಿಲಿಟರಿ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಎರಡು ನೆರೆಯ ದೇಶಗಳ ನಡುವಿನ ಸಂಬಂಧ ಹದಗೆಡುತ್ತಿದೆ. ಪಾಕಿಸ್ತಾನದ ಚಮನ್‌ನಲ್ಲಿ ಸಂಭವಿಸಿದ ಈ ಹಿಂಸಾಚಾರ ಇಸ್ಲಾಮಾಬಾದ್ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರ ನಡುವೆ ಉದ್ವಿಗ್ನತೆ ಹೆಚ್ಚಿಸಿದೆ. ಯಾವುದೇ ಪ್ರಚೋದನೆ ಇಲ್ಲದೆಯೂ ಬಲೂಚಿಸ್ತಾನದ ಚಮಾನ್ ಪಟ್ಟಣದ ಬಳಿ ಈ ದಾಳಿ ನಡೆದಿದೆ. ಎರಡು ದೇಶಗಳ ನಡುವಿನ ವ್ಯಾಪಾರಕ್ಕೆ ಚಮನ್ ಮುಖ್ಯ ಗಡಿಯಾಗಿದೆ.
ಸೋಮವಾರ ಬೆಳಗ್ಗೆ ಕ್ರಾಸಿಂಗ್ನನ್ನು ಪುನಃ ತೆರೆಯಲಾಗಿದೆ. ಈ ದಾಳಿಯಲ್ಲಿ 16 ಜನ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿ ಹೊಸ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡುತ್ತಿರುವುದಕ್ಕೂ ಇದಕ್ಕೂ ಲಿಂಕ್ ಇರಬಹುದು. ಈ ದಾಳಿ ಒಬ್ಬ ತಾಲಿಬಾನಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಕಂದಹಾರ್‌ನ ಗವರ್ನರ್, ಅತಾವುಲ್ಲಾ ಝೈದ್ ವಕ್ತಾರರು ಹೇಳಿದ್ದಾರೆ.
ಅಫ್ಘಾನಿಸ್ತಾನದ ಗುಂಡಿನ ದಾಳಿಗೆ ಪಡೆಗಳು ಪ್ರತ್ಯುತ್ತರ ನೀಡಿವೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಪೆಟ್ರೋಲ್ ಟ್ಯಾಂಕರ್ ಸ್ಫೋಟ.. 12 ಜನ ಸಜೀವ ದಹನ
ಆಫ್ಘನ್ನ ಮಧ್ಯಂತರ ಸರ್ಕಾರವು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ನವೆಂಬರ್‌ನಲ್ಲಿ ನಡೆದ ಮಾರಣಾಂತಿಕ ಗುಂಡಿನ ದಾಳಿಯಿಂದ ಚಮನ್‌ನಲ್ಲಿ ಎಂಟು ದಿನಗಳ ಕಾಲ ಗಡಿಯನ್ನು ಮುಚ್ಚಲಾಗಿತ್ತು. ಇದು ಭಾರಿ ವಾಣಿಜ್ಯ ನಷ್ಟಕ್ಕೆ ಕಾರಣವಾಗಿತ್ತು. ಅಲ್ಲದೇ ಇದರಿಂದ ಎರಡೂ ಕಡೆಯ ಜನರಿಗೆ ತೊಂದರೆಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸೋಮವಾರ ಟ್ವೀಟ್ ಮಾಡಿದ್ದಾರೆ.