ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೆಚ್ಚಿನ ಭದ್ರತೆಯ ಅಟೋಕ್ ಜೈಲಿನಲ್ಲಿ ಇಡಲಾಗಿದೆ. ಬಾಗಿಲು ಇರದ ಶೌಚಾಲಯ ಹೊಂದಿರುವ ಮತ್ತು ತಿಗಣೆ, ಕೀಟಗಳಿಂದ ತುಂಬಿರುವ ಸೆಲ್ನಲ್ಲಿ ಇಮ್ರಾನ್ರನ್ನು ಇಡಲಾಗಿದೆ. "70 ವರ್ಷ ವಯಸ್ಸಿನ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರೂ ಆಗಿರುವ ಖಾನ್‌ಗೆ ಪಂಜಾಬ್ ಪ್ರಾಂತ್ಯದ ಜೈಲಿನಲ್ಲಿ ಮೂರನೇ ದರ್ಜೆಯ (ಸಿ ದರ್ಜೆ ಅಥವಾ ಥರ್ಡ್ ಕ್ಲಾಸ್) ಸೌಲಭ್ಯಗಳನ್ನು ಒದಗಿಸಲಾಗಿದೆ" ಎಂದು ಖಾನ್ ಅವರ ವಕೀಲ ನಯೀಮ್ ಹೈದರ್ ಪಂಜೋತಾ ಆರೋಪಿಸಿದ್ದಾರೆ.
"ದೇಶದ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಮಾಜಿ ನಾಯಕನನ್ನು ಬಂಧಿಸಿರುವ ಜೈಲಿನ ಸೆಲ್ ನೊಣಗಳು ಮತ್ತು ಕೀಟಗಳಿಂದ ತುಂಬಿದೆ" ಎಂದು ಅವರು ಹೇಳಿದರು. ಇಮ್ರಾನ್ ತೆರೆದ ಶೌಚಾಲಯವನ್ನು ಹೊಂದಿರುವ ಸಣ್ಣ ಕೋಣೆಯಲ್ಲಿದ್ದಾರೆ ಎಂದು ಸೋಮವಾರ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾದ ನಂತರ ಪಂಜೋತಾ ಹೇಳಿದರು. "ತಮ್ಮ ಇಡೀ ಜೀವನವನ್ನು ಜೈಲಿನಲ್ಲಿ ಕಳೆಯಲು ಸಿದ್ಧ" ಎಂದು ಇಮ್ರಾನ್ ಹೇಳಿದರು ಎಂದು ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಪೊಲೀಸರು ತನಗೆ ಬಂಧನ ವಾರಂಟ್ ತೋರಿಸಲಿಲ್ಲ ಮತ್ತು ಲಾಹೋರ್ಲ್ಲಿರುವ ತನ್ನ ಮನೆಯಲ್ಲಿದ್ದಾಗ ಪತ್ನಿಯ ಕೋಣೆಯ ಬಾಗಿಲು ಮುರಿಯಲು ಪ್ರಯತ್ನಿಸಿದರು" ಎಂದು ಖಾನ್ ಹೇಳಿದ್ದಾರೆ ಎಂದು ಪಂಜೋತಾ ಹೇಳಿದರು. ಇಮ್ರಾನ್ ಅವರ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ದಾಖಲೆಗಳಿಗೆ ಸಹಿ ಪಡೆಯಲು ಜೈಲು ಅಧಿಕಾರಿಯ ಸಮ್ಮುಖದಲ್ಲಿ ಖಾನ್ ಅವರನ್ನು ಪಂಜೋತಾ ಒಂದು ಗಂಟೆ 45 ನಿಮಿಷಗಳ ಕಾಲ ಭೇಟಿಯಾಗಿದ್ದರು.
"ನನ್ನನ್ನು ಟಿವಿ ಅಥವಾ ಪತ್ರಿಕೆ ಲಭ್ಯವಿಲ್ಲದ ಕತ್ತಲೆ ಕೋಣೆಯಲ್ಲಿ ಇರಿಸಲಾಗಿದೆ. ನನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ" ಎಂದು ಖಾನ್ ಹೇಳಿದರು ಎಂದು ಪಂಜೋತಾ ತಿಳಿಸಿದರು.
ಇಮ್ರಾನ್‌ಗೆ ಜೈಲು ಶಿಕ್ಷೆ ಏಕೆ?: ತೋಶಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಖಾನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದಾಗಿ ಕೆಲವೇ ಸಮಯದ ನಂತರ ಅವರನ್ನು ಲಾಹೋರ್ನಲ್ಲಿರುವ ಅವರ ಮನೆಯಿಂದ ಶನಿವಾರ ಬಂಧಿಸಲಾಯಿತು. ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಕಳುಹಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಇಮ್ರಾನ್ರನ್ನು ಪಂಜಾಬ್ ಪ್ರಾಂತ್ಯದ ಅಟೋಕ್ ನಗರದ ಅಟೋಕ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಸರ್ಕಾರಕ್ಕೆ ಬಂದ ಉಡುಗೊರೆಗಳನ್ನು ಮಾರಿ 4,97,500 ಡಾಲರ್ ಲಾಭ ಗಳಿಸಿದ ಆರೋಪ ಇಮ್ರಾನ್ ಮೇಲಿದೆ. ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಇಮ್ರಾನ್ ಖಾನ್, ಸರ್ಕಾರಿ ಸ್ವಾಮ್ಯದ ನಿಧಿ ಸಂಸ್ಥೆಯಾದ ತೋಶಖಾನಾದಿಂದ ಕಾನೂನುಬದ್ಧವಾಗಿ ಉಡುಗೊರೆಗಳನ್ನು ಖರೀದಿಸಲಾಗಿದೆ ಎಂದು ಹೇಳಿದ್ದಾರೆ. ಶನಿವಾರದ ನ್ಯಾಯಾಲಯದ ತೀರ್ಪು ಖಾನ್ ಅವರ ರಾಜಕೀಯ ಜೀವನಕ್ಕೆ ಪೆಟ್ಟು ನೀಡಿದೆ. ಈ ವರ್ಷದ ಕೊನೆಯಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿ ತನ್ನ ಅವಧಿಯನ್ನು ಆಗಸ್ಟ್ 12 ರಂದು ಪೂರ್ಣಗೊಳಿಸಲಿದೆ.
ಇದನ್ನೂ ಓದಿ : India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು