ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪುತ್ರ ಹಮ್ಜಾ ಶೆಹಬಾಜ್ ಇದೀಗ ಪಂಜಾಬ್ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬರೋಬ್ಬರಿ 110 ಮಿಲಿಯನ್ ಜನರನ್ನ ಹೊಂದಿರುವ ಪ್ರಾಂತ್ಯ ಇದಾಗಿದೆ. ಅನೇಕ ನಾಟಕೀಯ ಬೆಳವಣಿಗೆಗಳ ನಡುವೆ ವಿಧಾನಸಭೆ ಸ್ಪೀಕರ್ ರಾಜಾ ಪರ್ವೇಜ್ ಅಶ್ರಫ್ 47 ವರ್ಷದ ಹಮ್ಜಾ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಪಂಜಾಬ್ ರಾಜ್ಯಪಾಲ ಓಮರ್ ಸರ್ಫಾಜ್ ಚೀಮಾ, ನಿರ್ಗಮಿತ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರ ರಾಜೀನಾಮೆ ತಿರಸ್ಕಾರ ಮಾಡಿದ್ದು, ಹಮ್ಜಾ ಆಯ್ಕೆ ಸಾಂವಿಧಾನಿಕವಾಗಿಲ್ಲ ಎಂದು ತಿಳಿಸಿದ್ದರು. ಇದರ ಮಧ್ಯೆ ಕೂಡ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: ಬ್ರಿಟನ್ ಸಂಸತ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ: ಸಂಸದ ಅಮಾನತು
ಹಮ್ಜಾ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ರಾಜಭವನದ ಸುತ್ತ ಬಿಗಿ ಭದ್ರತೆ ಒದಗಿಸಿದ್ದರು. ಇದಕ್ಕೆ ಗವರ್ನರ್ ಚೀಮಾ ಕೂಡ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯ ನ್ಯಾಯಾಧೀಶರ ಮಧ್ಯಸ್ಥಿಕೆಗೆ ಆಗ್ರಹಿಸಿದ್ದಾರೆ. ಅಸಾಂವಿಧಾನಿಕ ರೀತಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಆಯ್ಕೆ ಮಾಡಲಾಗಿದ್ದು, ಇದರ ಬಗ್ಗೆ ನ್ಯಾಯಮೂರ್ತಿಗಳು ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದ ವೇಳೆ ಅಕ್ರಮ ಹಣ ವರ್ಗಾವಣೆ ಮತ್ತು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹಮ್ಜಾ 20 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾರೆ. 1988ರಲ್ಲಿ ಪಂಜಾಬ್ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾಗಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಈಗಾಗಲೇ ಮೂರು ಸಲ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರ ಮಗ ಸಿಎಂ ಆಗಿ ಅಧಿಕಾರ ಪದಗ್ರಹಣ ಮಾಡಿದ್ದಾರೆ.