ಇಸ್ಲಾಮಾಬಾದ್ : ದೇಶ ಹಿತಕ್ಕಾಗಿ ಯಾರೊಂದಿಗಾದರೂ ಮಾತುಕತೆ ನಡೆಸಲು ಸಿದ್ಧ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಯಾವುದೇ ಪ್ರತಿಪಕ್ಷ ನಾಯಕರು ಹಾಗೂ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಸರ್ಕಾರದ ಯಾರೊಂದಿಗೂ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಈ ಮುಂಚೆ ಇಮ್ರಾನ್ ಖಾನ್ ಹೇಳಿದ್ದರು. ಆದರೆ, ಈಗ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಅಧ್ಯಕ್ಷರೂ ಆಗಿರುವ ಅಧ್ಯಕ್ಷ ಇಮ್ರಾನ್ ಖಾನ್ ತಮ್ಮನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ.
ದೇಶದ ಹಿತದೃಷ್ಟಿಯಿಂದ ಯಾರೊಂದಿಗೂ ಮಾತನಾಡಲು ಸಿದ್ಧ ಎಂದು ಇಮ್ರಾನ್ ಖಾನ್ ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಗತಿ, ಅದರ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಾನು ಯಾವುದೇ ತ್ಯಾಗ ಮಾಡಲು ಸಿದ್ಧ. ನಾನು ಯಾರೊಂದಿಗೂ ಮಾತನಾಡಲು ಸಿದ್ಧನಿದ್ದೇನೆ ಮತ್ತು ಅದಕ್ಕಾಗಿ ಮುಂದುವರಿಯಲು ಸಿದ್ಧ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ದೇಶದ ಹಿತಾಸಕ್ತಿಗಾಗಿ ಮಾತುಕತೆಯ ಮುಕ್ತ ಪ್ರಸ್ತಾಪವನ್ನು ನೀಡಿದ ಒಂದು ದಿನದ ನಂತರ ಮಾತುಕತೆ ನಡೆಸಲು ಇಮ್ರಾನ್ ಖಾನ್ ಒಪ್ಪಿಗೆ ನೀಡಿದ್ದಾರೆ.
ಇಮ್ರಾನ್ ಖಾನ್ ಮಾತುಕತೆಗೆ ಒಪ್ಪಿಗೆ ಸೂಚಿಸಿರುವುದು ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿ ರಾಜಕೀಯ ಶಕ್ತಿಗಳ ನಡುವೆ ಮಾತುಕತೆ ನಡೆಯುವ ಆಶಾಭಾವನೆಯನ್ನು ಮೂಡಿಸಿವೆ. ಈಗ ಹಲವಾರು ತಿಂಗಳುಗಳಿಂದ ಇಮ್ರಾನ್ ಖಾನ್ ಹಾಗೂ ಅವರ ರಾಜಕೀಯ ಪ್ರತಿಸ್ಪರ್ಧಿಗಳ ನಡುವೆ ರಾಜಕೀಯ ಕದನ ನಡೆದೇ ಇದೆ. ಲಾಹೋರ್‌ನಲ್ಲಿರುವ ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ಪಿಟಿಐ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿವೆ. ಬಹುಶಃ ಈಗ ಎರಡೂ ಕಡೆಯವರು ಇದರಿಂದ ಮುಕ್ತವಾಗಿ ಶಾಂತಿ ಬಯಸುತ್ತಿದ್ದಾರೆ ಎನ್ನಲಾಗಿದೆ.
ಸರಕಾರವು ಮಾತುಕತೆಯ ಬಗ್ಗೆ ಗಂಭೀರವಾಗಿದ್ದರೆ, ಅದರಲ್ಲೂ ವಿಶೇಷವಾಗಿ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಬಗ್ಗೆ ಮಾತನಾಡುವುದಾದರೆ ಅದು ಕೇವಲ ಹೇಳಿಕೆ ನೀಡುವುದನ್ನು ಬಿಟ್ಟು ಔಪಚಾರಿಕವಾಗಿ ಮಾತುಕತೆಯ ಪ್ರಸ್ತಾಪ ಮಾಡಬೇಕು ಎಂದು ಫವಾದ್ ಚೌಧರಿ ಹೇಳಿದರು. ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದರಿಂದ ಉದ್ದೇಶಪೂರ್ವಕವಾಗಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ಚೌಧರಿ, ಪಿಟಿಐ ತನ್ನ ಅಧ್ಯಕ್ಷ ಡಾ. ಆರಿಫ್ ಅಲ್ವಿ ಅವರನ್ನು ಎರಡೂ ಕಡೆಗೆ ಮಧ್ಯಸ್ಥಿಕೆ ನಡೆಸಲು ನಿಯೋಜಿಸಿತ್ತು. ಆದರೂ ಅದು ಯಾವುದೇ ಫಲಿತಾಂಶ ನೀಡಲಿಲ್ಲ ಎಂದು ಹೇಳಿದರು.
ಪಾಕಿಸ್ತಾನದ ಸೆನೆಟ್‌ನ ವಿಶೇಷ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಶೆಹಬಾಜ್ ಷರೀಫ್, ಇಮ್ರಾನ್ ಖಾನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಹಸ್ತಲಾಘವವನ್ನೂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಎರಡೂ ಕಡೆಯವರು ಪರಸ್ಪರರ ವಿರುದ್ಧ ತಮ್ಮ ನಿಲುವು ಮೃದುವಾಗಿಸಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಈಗ ರಾಜಕೀಯ ಪ್ರಸ್ತುತತೆ ಮತ್ತು ರಾಜಕೀಯ ಶಕ್ತಿಗಳ ಒಗ್ಗಟ್ಟಿಗಾಗಿ ಪರಸ್ಪರ ತಿಳಿವಳಿಕೆಯ ನೆಲೆ ಕಂಡುಕೊಳ್ಳಲು ಎರಡೂ ಪಕ್ಷಗಳನ್ನು ಮಾತುಕತೆಗೆ ತರಲು ನ್ಯಾಯಾಂಗ ಅಥವಾ ಆಡಳಿತ ಮುಂದಾಗಬೇಕಿದೆ.
ಇದನ್ನೂ ಓದಿ : ಭಾರತದಲ್ಲಿ ಶಾಂಘೈ ಸಹಕಾರ ಶೃಂಗಸಭೆ: ಪಾಕಿಸ್ತಾನಕ್ಕೆ ಆಹ್ವಾನ