ಇಸ್ಲಾಮಾಬಾದ್ (ಪಾಕಿಸ್ತಾನ): ತೀವ್ರ ಹಣಕಾಸು ಮುಗ್ಗಟ್ಟು, ಆಹಾರ ಕೊರತೆ, ರಾಜಕೀಯ ಕಿತ್ತಾಟದಿಂದ ಬಳಲುತ್ತಿರುವ ಕುತಂತ್ರಿ ರಾಷ್ಟ್ರ ಪಾಕಿಸ್ತಾನ ತನ್ನ ನಾಗರಿಕರ ರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಿದೆ. ಮಕ್ಕಳ ಮೇಲೆ ನಿತ್ಯ ನಿರಂತರ ಕಿರುಕುಳ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಆ ರಾಷ್ಟ್ರದ ಹೀನಾಯ ಸ್ಥಿತಿಯ ದ್ಯೋತಕವಾಗಿದೆ.
ದೇಶಾದ್ಯಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿವೆ ಎಂದು ವರದಿಯೊಂದು ಭಿತ್ತರವಾಗಿದೆ. ಆನ್‌ಲೈನ್ ಮೂಲಕ ಮಕ್ಕಳ ಮೇಲಿನ ದೌರ್ಜನ್ಯದಲ್ಲಿ ದೇಶ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. 2022 ರಲ್ಲಿ ಅವರ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಘಟನೆಗಳು ಶೇಕಡಾ 33 ರಷ್ಟು ಹೆಚ್ಚಳ ಕಂಡಿವೆ ಎಂಬ ಆಘಾತಕಾರಿ ಅಂಕಿಅಂಶ ಬೆಳಕಿಗೆ ಬಂದಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿಯಂತೆ, ಕಳೆದ ವರ್ಷ ಪಾಕಿಸ್ತಾನದಲ್ಲಿ 4,253 ಮಕ್ಕಳು ಲೈಂಗಿಕ ಮತ್ತು ಇತರೆ ಕಿರುಕುಳಕ್ಕೆ ತುತ್ತಾಗಿದ್ದಾರೆ. ದಿನಕ್ಕೆ ಸುಮಾರು 12 ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತವೆ. ಯಾವುದೇ ದೇಶಕ್ಕೆ ಹೋಲಿಕೆ ಮಾಡಿದಲ್ಲಿ ಇದು ಭಯಾನಕ ಅಂಕಿ ಅಂಶವಾಗಿದೆ. ದೌರ್ಜನ್ಯಕ್ಕೆ ಒಳಗಾದವರಲ್ಲಿ ಬಹುತೇಕರು ಹೆಣ್ಣುಮಕ್ಕಳಾಗಿದ್ದಾರೆ. ಇದರಲ್ಲಿ 6 ರಿಂದ 15 ವರ್ಷದ ವಯಸ್ಸಿನ ಮಕ್ಕಳೇ ಎಂಬುದು ಆತಂಕಕಾರಿ ಸಂಗತಿ. ದುರಂತವೆಂದರೆ ಹೆಚ್ಚಿನ ಮಕ್ಕಳು ಸಂಬಂಧಿಕರು ಮತ್ತು ನಿಕಟ ವ್ಯಕ್ತಿಗಳ ದಾಹಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಭಯಾನಕ ಸತ್ಯ ಬೆಚ್ಚಿಬೀಳಿಸುವಂತಿದೆ.
ಓದಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು: 2019ರಲ್ಲಿ ವರದಿಯಾದ ಪ್ರಕರಣಗಳೆಷ್ಟು ಗೊತ್ತಾ?
ಇಂತಹ ಘಟನೆಗಳು ಕಿರುಕುಳಕ್ಕೊಳಗಾದ ಚಿಕ್ಕ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಈ ಮಕ್ಕಳು ಬೆಳೆದಂತೆ ಆತಂಕ, ಖಿನ್ನತೆ ಮತ್ತು ಆತ್ಮವಿಶ್ವಾಸ ಕೊರತೆಯಿಂದ ಬಳಲುತ್ತಾರೆ. ಸಾಂಕ್ರಾಮಿಕ ರೋಗವಾಗಿ ಪಸರಿಸುತ್ತಿರುವ ಈ ವಿದ್ಯಮಾನದ ವಿರುದ್ಧ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿವೆ. ಡಾರ್ಕ್ ವೆಬ್‌ಗಳಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳು ನಿರ್ಭಯದಿಂದ ಹರದಾಡುತ್ತಿವೆ. ಆನ್‌ಲೈನ್‌ನಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಮಕ್ಕಳ ವಯಸ್ಸು 9 ರಿಂದ 13 ವರ್ಷವಾಗಿದೆ. ಇದೇ ವಯಸ್ಸಿನ ಮಕ್ಕಳೂ ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬದು ಕಹಿ ಸತ್ಯವಾಗಿದೆ.
2 ಮಿಲಿಯನ್ಗಿಂತಲೂ ಅಧಿಕ ಮಕ್ಕಳ ಅಶ್ಲೀಲ ವಿಡಿಯೋಗಳು ಇಂಟರ್ನೆಟ್ನಲ್ಲಿ ಅಪ್‌ಲೋಡ್ ಆದ ಪ್ರಕರಣಗಳನ್ನು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ದಾಖಲಿಸಿದೆ. ಅಂತಹ ಅಪರಾಧಗಳನ್ನು ಪರಿಶೀಲಿಸಲು ತಂಡವನ್ನು ರೂಪಿಸಲಾಗಿದೆ. ಆದಾಗ್ಯೂ, ತಪ್ಪಿತಸ್ಥರ ವಿರುದ್ಧ ಕ್ರಮವಾದ ಪ್ರಕರಣಗಳು ತೀರಾ ಕಡಿಮೆ. ಕಳೆದ 4 ವರ್ಷಗಳಲ್ಲಿ 403 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. 2018 ರಿಂದ ಕೇವಲ 124 ವ್ಯಕ್ತಿಗಳನ್ನು ಮಾತ್ರ ಬಂಧಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಸೇರಿ ವಿವಿಧ ಅಪರಾಧಗಳು ಇವರ ಮೇಲಿವೆ ಎಂಬ ಅಂಶ ವರದಿಯಲ್ಲಿದೆ.
ಇದನ್ನೂ ಓದಿ: ಕ್ಯಾಥೋಲಿಕ್ ಚರ್ಚ್ನಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪತ್ತೆ :ವರದಿ