ಲಾಹೋರ್: "ಭಾರತ ಚಂದ್ರನ ಅಂಗಳಕ್ಕೆ ಕಾಲಿರಿಸಿ, ಜಿ20 ಶೃಂಗಸಭೆಯನ್ನೂ ಆಯೋಜಿಸಿರುವಾಗ ನನ್ನ ದೇಶ ವಿಶ್ವದಿಂದ ಹಣವನ್ನು ಭಿಕ್ಷೆ ಬೇಡುತ್ತಿದೆ" ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದರು. ದೇಶದ ಇಂದಿನ ಆರ್ಥಿಕ ಬಿಕ್ಕಟ್ಟುಗಳಿಗೆ ಸೇನೆಯ ಮಾಜಿ ಜನರಲ್‌ಗಳು ಹಾಗೂ ನ್ಯಾಯಾಧೀಶರನ್ನು ಅವರು ದೂಷಿಸಿದರು.
ಸೋಮವಾರ ಸಂಜೆ ಲಂಡನ್‌ನಿಂದ ವಿಡಿಯೋ ಮೂಲಕ ಲಾಹೋರ್‌ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷರೀಫ್, "ಪಾಕಿಸ್ತಾನದ ಆರ್ಥಿಕತೆ ಕಳೆದ ಹಲವು ವರ್ಷಗಳಿಂದ ಪತನದತ್ತ ಸಾಗುತ್ತಿದೆ. ಅನಿಯಂತ್ರಿತ ಎರಡಂಕಿಯ ಹಣದುಬ್ಬರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ" ಎಂದು ಸ್ವದೇಶದ ವಿರುದ್ಧ ವಾಗ್ದಾಳಿ ನಡೆಸಿದರು.
"ಭಾರತ ಚಂದ್ರನನ್ನು ತಲುಪಿದೆ. ಜಿ20 ಶೃಂಗಸಭೆಯನ್ನೂ ಯಶಸ್ವಿಯಾಗಿ ನಡೆಸಿದೆ. ಇಂದು ಪಾಕಿಸ್ತಾನದ ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಏಕೆ ಸಾಧಿಸಲು ಸಾಧ್ಯವಾಗಲಿಲ್ಲ?. ಇದಕ್ಕೆ ಇಲ್ಲಿ ಯಾರು ಹೊಣೆ?" ಎಂದು ಅವರು ಕೇಳಿದರು.
ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷದ 73 ವರ್ಷದ ಹಿರಿಯ ನಾಯಕ ಷರೀಫ್, 1990ರಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ ಎಂದರು. ಇದೇ ವೇಳೆ, ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ವಿದೇಶಿ ವಿನಿಮಯ ಸಂಗ್ರಹ ಕೇವಲ ಒಂದು ಶತಕೋಟಿ ಡಾಲರ್‌ಗಳಷ್ಟಿತ್ತು. ಆದರೆ ಈಗ 600 ಶತಕೋಟಿ ಡಾಲರ್‌ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ ನೋಡಿ. ಪಾಕಿಸ್ತಾನವು ಭಿಕ್ಷಾಟನೆಯಿಂದ ಎಲ್ಲಿ ಉಳಿದಿದೆ ಎಂದು ಪ್ರಶ್ನಿಸಿದರು. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಪಾಕಿಸ್ತಾನದ ಈ ದುಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ.
ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರಕ್ಕೆ ಷರೀಫ್ ಮೊದಲ ಬಾರಿಗೆ ಅಕ್ಟೋಬರ್ 21ರಂದು ದೇಶಕ್ಕೆ ಹಿಂದಿರುಗುವುದಾಗಿ ಘೋಷಿಸಿದರು. ಯುಕೆಯಲ್ಲಿ ನಾಲ್ಕು ವರ್ಷಗಳ ಗಡಿಪಾರು ಕೊನೆಗೊಂಡಿದೆ. ನ.2019ರಲ್ಲಿ ಅಲ್ ಅಜೀಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ 7 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಷರೀಫ್, ವೈದ್ಯಕೀಯ ಆಧಾರದ ಮೇಲೆ ದೇಶ ತೊರೆಯಲು ಆಗಿನ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಆದೇಶಿಸಿದ್ದರು. ಮುಂದಿನ ತಿಂಗಳು ಲಾಹೋರ್‌ಗೆ ಆಗಮಿಸುವ ಮೊದಲು ಅವರಿಗೆ ರಕ್ಷಣಾತ್ಮಕ ಜಾಮೀನು ನೀಡುವುದಾಗಿ ಪಿಎಂಎಲ್-ಎನ್ ಹೇಳಿದೆ.
2017ರ ಮಿಲಿಟರಿ ಮತ್ತು ನ್ಯಾಯಾಂಗ ಸ್ಥಾಪನೆಯ ವಿರುದ್ಧವೂ ಷರೀಫ್ ವಾಗ್ದಾಳಿ ನಡೆಸಿದರು. ತಮ್ಮನ್ನು ಪ್ರಧಾನ ಮಂತ್ರಿ ಕಚೇರಿಯಿಂದ ಮನೆಗೆ ಕಳುಹಿಸಲು ಅವರು ಜವಾಬ್ದಾರರು ಎಂದು ಆರೋಪಿಸಿದರು. "ದೇಶವನ್ನು ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಮುಕ್ತಗೊಳಿಸಿದ ವ್ಯಕ್ತಿಯನ್ನು (ನವಾಜ್) ನಾಲ್ವರು ನ್ಯಾಯಾಧೀಶರು ಮನೆಗೆ ಕಳುಹಿಸಿದ್ದಾರೆ" ಎಂದು ಷರೀಫ್ ತಮ್ಮ ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದರು. ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮುಖ್ಯಸ್ಥ ಜನರಲ್ ಫೈಜ್ ಹಮೀದ್ ತಮ್ಮನ್ನು ಪದಚ್ಯುತಗೊಳಿಸಿದ್ದಾರೆ ಎಂದರು. ಅಲ್ಲದೇ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂದು ಷರೀಫ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂದಿನ ತಿಂಗಳು ನವಾಜ್ ಶರೀಫ್ ಪಾಕಿಸ್ತಾನಕ್ಕೆ ವಾಪಸ್; ನಿರ್ಗಮಿತ ಪ್ರಧಾನಿ ಶಹಬಾಜ್