ಕೇಪ್ ವರ್ಡೆ, ಆಫ್ರಿಕಾ: ಸೆನೆಗಲ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ದ್ವೀಪಗಳ ಕರಾವಳಿಯಲ್ಲಿ ದುರುಂತಕ್ಕಿಡಾಗಿದೆ. ಈ ದುರಂತದಲ್ಲಿಲ ಸುಮಾರು 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಬಹಿರಂಗಪಡಿಸಿವೆ. ಅಷ್ಟೇ ಅಲ್ಲ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಬುಧವಾರ ಖಚಿತ ಪಡಿಸಿದೆ.
ದೋಣಿ ದುರಂತದ ಬಗ್ಗೆ ಮಾಹಿತಿ ಖಚಿತ ಪಡಿಸಿದ ಐಒಎಂ ವಕ್ತಾರ: ಮಾಧ್ಯಮಗಳೊಂದಿಗೆ ಮಾತನಾಡಿದ IOM ವಕ್ತಾರ ಸಫಾ ಮಸೆಹ್ಲಿ, ಅಪಘಾತದಲ್ಲಿ 63 ಜನರು ಸಾವನ್ನಪ್ಪಿರುವ ಭಯವಿದ್ದು, 38 ಜನರನ್ನು ರಕ್ಷಿಸಲಾಗಿದೆ. ರಕ್ಷಿಸಿದ 38 ಜನರಲ್ಲಿ ನಾಲ್ವರು ಮಕ್ಕಳು ಸಹ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸ್ಪ್ಯಾನಿಷ್ ಮೀನುಗಾರಿಕಾ ಹಡಗಿನಿಂದ ಮಾಹಿತಿ ರವಾನೆ: ಕೇಪ್ ವರ್ಡೆ ದ್ವೀಪಗಳಿಂದ ಸುಮಾರು 150 ನಾಟಿಕಲ್ ಮೈಲಿ (277 ಕಿಮೀ) ದೂರದಲ್ಲಿರುವ ಅಟ್ಲಾಂಟಿಕ್ ಸಾಗರದಲ್ಲಿ ಮೀನುಗಾರಿಕಾ ದೋಣಿಯೊಂದು ದುರಂತಕ್ಕಿಡಾಗಿರುವುದು ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲಿಗೆ ಈ ದುರಂತಕ್ಕಿಡಾಗಿದ್ದ ದೋಣಿಯನ್ನು ಸ್ಪ್ಯಾನಿಷ್ ಮೀನುಗಾರಿಕಾ ಹಡಗಿನ ಸಿಬ್ಬಂದಿ ಗುರುತಿಸಿದ್ದರು. ನಂತರ ಈ ಮಾಹಿತಿಯನ್ನು ಅವರು ಕೇಪ್ ವರ್ಡಿಯನ್ ಅಧಿಕಾರಿಗಳಿಗೆ ರವಾನಿಸಿದರು.
ಏಳು ಶವಗಳು ಪತ್ತೆ, 56 ಮೃತ ದೇಹಗಳಿಗಾಗಿ ಮುಂದುವರಿದ ಶೋಧ: ಯುರೋಪಿಯನ್ ಒಕ್ಕೂಟದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳ ಕರಾವಳಿಯಿಂದ ಸುಮಾರು 600 ಕಿಲೋಮೀಟರ್ (350 ಮೈಲಿ) ದೂರದಲ್ಲಿ ಕೇಪ್ ವರ್ಡೆ ದ್ವೀಪಗಳು ಕಂಡು ಬರುತ್ತವೆ. ಮಾಹಿತಿ ತಿಳಿದಾಕ್ಷಣ ರಕ್ಷಣಾ ಭರದಿಂದ ಸಾಗಿವೆ. ಈಗಾಗಲೇ ಸಮುದ್ರದಿಂದ ಸುಮಾರು 7 ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ 56 ಜನರ ಶವಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಜನರು ಎಷ್ಟು?: ಸಾಮಾನ್ಯವಾಗಿ ದೋಣಿ ಅಪಘಾತದ ನಂತರ ಜನರು ಕಾಣೆಯಾದ ವೇಳೆ ಅವರು ಮೃತಪಟ್ಟಿರಬಹುದೆಂದು ಭಾವಿಸಲಾಗುತ್ತದೆ ಅಂತಾ ಅಧಿಕಾರಿ ತಿಳಿಸಿದರು. ದೋಣಿಯಲ್ಲಿ 101 ಮಂದಿ ಪ್ರಯಾಣಿಸುತ್ತಿದ್ದರು. ಜುಲೈ 10 ರಂದು 101 ಜನರೊಂದಿಗೆ ದೋಣಿ ಸೆನೆಗಲ್‌ನ ಫಾಸ್ಸೆ ಬೌಯೆಯಿಂದ ಹೊರಟಿತ್ತು ಎಂದು ರಕ್ಷಿಸಿದ ಜನರನ್ನು ಉಲ್ಲೇಖಿಸಿ ಸೆನೆಗಲ್ ವಿದೇಶಾಂಗ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಇನ್ನು ದೋಣಿ ಮುಳಗಲು ಏಣು ಕಾರಣ ಎಂಬುದರ ಬಗ್ಗೆ ಪೊಲೀಸರು ಮತ್ತು ನೌಕಾ ಪಡೆ ಅಧಿಕಾರಿ ತನಿಖೆ ಕೈಗೊಳ್ಳುವರು. ಈ ದೋಣಿ ಮುಳುಗಡೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.