ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಶಾಶ್ವತವಾಗಿ ಶಾಂತಿ ಸ್ಥಾಪಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕೆಂದು ವಿಶ್ವಸಂಸ್ಥೆಗೆ ಮೆಕ್ಸಿಕೊ ಕೇಳಿಕೊಂಡಿದೆ.
ನ್ಯೂಯಾರ್ಕ್ನಲ್ಲಿ ನಡೆದ ಉಕ್ರೇನ್ ಮೇಲಿನ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮೆಕ್ಸಿಕೊ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಕಾಸಾಬಾನ್ ಈ ಬೇಡಿಕೆ ಮಂಡಿಸಿದರು. ಉಜ್ಬೆಕಿಸ್ತಾನದ ಸಮರಕಂಡ್ನಲ್ಲಿ ನಡೆದ 22ನೇ ಶಾಂಘೈ ಸಹಕಾರ ಒಕ್ಕೂಟದ ಸಭೆಯ ಪಾರ್ಶ್ವದಲ್ಲಿ ಮೋದಿ ಹಾಗೂ ಪುಟಿನ್ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಇಂದಿನ ಕಾಲ ಯುದ್ಧ ಮಾಡುವ ಕಾಲವಲ್ಲ ಎಂದು ಮೋದಿ ಪುಟಿನ್ ಅವರಿಗೆ ಹೇಳಿದ್ದು ಗಮನಾರ್ಹ. ಮೋದಿ ಅವರ ಸಲಹೆಯನ್ನು ಅಮೆರಿಕ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ ಡಮ್ ಸೇರಿದಂತೆ ಹಲವಾರು ರಾಷ್ಟ್ರಗಳು ಸ್ವಾಗತಿಸಿದ್ದವು.
ಶಾಂತಿ ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯವು ತನ್ನ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಶಾಂತಿಪ್ರಿಯ ದೇಶವಾಗಿರುವ ಮೆಕ್ಸಿಕೊ ಬಯಸುತ್ತದೆ ಎಂದು ಕಾಸಾಬಾನ್ ಹೇಳಿದರು.
ಇದನ್ನೂ ಓದಿ: 'ಇದು ಯುದ್ಧದ ಸಮಯವಲ್ಲ'.. ಪುಟಿನ್ಗೆ ತಿಳಿಹೇಳಿದ ಮೋದಿಗೆ ಯುಎಸ್ ಮಾಧ್ಯಮಗಳು ಬಹುಪರಾಕ್