ಸಿಯೋಲ್ (ದಕ್ಷಿಣ ಕೊರಿಯಾ) : ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಇತ್ತೀಚಿಗೆ ಖಂಡಾಂತರ ಕ್ಷಿಪಣಿ ಪರೀಕ್ಷೆಯಲ್ಲಿ ತೊಡಗಿರುವ ಸೈನಿಕರನ್ನು ಶ್ಲಾಘಿಸಿದರು. ಬಳಿಕ, ಅಮೆರಿಕ ನೇತೃತ್ವದ ಮಿಲಿಟರಿ ಬೆದರಿಕೆ ನಿಗ್ರಹಿಸಲು ಇನ್ನಷ್ಟು ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರತಿಸ್ಪರ್ಧಿಯ ಮೇಲೆ ಪರಮಾಣು ದಾಳಿ ನಡೆಸಲು ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡದ್ದಾರೆ ಎಂದು ರಾಜ್ಯ ಮಾಧ್ಯಮಗಳು ಗುರುವಾರ ವರದಿ ಮಾಡಿದೆ.
ಕಳೆದ ವರ್ಷ ಪರಮಾಣು ಸಿದ್ಧಾಂತ ಅಳವಡಿಸಿಕೊಂಡ ನಂತರ ಕಿಮ್ ಪದೇ ಪದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪೂರ್ವಭಾವಿಯಾಗಿ ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಅನೇಕ ವಿದೇಶಿ ತಜ್ಞರು ಉತ್ತರ ಕೊರಿಯಾವು ಇನ್ನೂ ಕಾರ್ಯನಿರ್ವಹಿಸುವ ಪರಮಾಣು ಕ್ಷಿಪಣಿಗಳನ್ನು ಪಡೆದುಕೊಂಡಿಲ್ಲ, ಅಮೆರಿಕ ಮತ್ತು ಅದರ ಮಿತ್ರ ಪಡೆಗಳಿಂದ ಹೊರಗುಳಿದಿರುವ ಕಾರಣ ಅದರ ಅಣ್ವಸ್ತ್ರಗಳನ್ನು ಮೊದಲು ಬಳಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾವು ಕಳೆದ ಐದು ತಿಂಗಳಲ್ಲಿ ತನ್ನ ಮೊದಲ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಸೋಮವಾರ ನಡೆಸಿತು, ಇದು ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಎಚ್ಚರಿಕೆಯ ಡ್ರಿಲ್ ಎಂದು ಕರೆದಿದೆ. ಇನ್ನೊಂದೆಡೆ, ಉತ್ತರ ಕೊರಿಯಾ ಪರೀಕ್ಷೆ ನಡೆಸಿರುವ ಮಿಸೈಲ್ ಪಾಶ್ಚಿಮಾತ್ಯ ದೇಶಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಉತ್ತರ ಕೊರಿಯಾದ ಹೊಸ ಮತ್ತು ಅತ್ಯಂತ ಶಕ್ತಿಶಾಲಿ ICBM ಅಭಿವೃದ್ಧಿಶೀಲ ಘನ-ಇಂಧನದ Hwasong-18 ಕ್ಷಿಪಣಿ ಉಡಾವಣೆಯಲ್ಲಿ ಭಾಗಿಯಾಗಿರುವವರ ಕೆಲಸವನ್ನು ಅಭಿನಂದಿಸಲು ಕಿಮ್ ಬುಧವಾರ ಜನರಲ್ ಮಿಸೈಲ್ ಬ್ಯೂರೋದಲ್ಲಿ ಪಡೆಗಳನ್ನು ಭೇಟಿಯಾದರು ಎಂದು ಉತ್ತರದ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ತಿಳಿಸಿದೆ.
2022 ರ ಆರಂಭದಿಂದ ಉತ್ತರ ಕೊರಿಯಾವು ಸುಮಾರು 100 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಅವುಗಳಲ್ಲಿ ಹಲವು ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಅಮೆರಿಕ ಮತ್ತು ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿಕೊಂಡಿವೆ. ಸೋಮವಾರದ ಹ್ವಾಸಾಂಗ್-18 ಉಡಾವಣೆಯು ಈ ವರ್ಷ ಶಸ್ತ್ರಾಸ್ತ್ರದ ಮೂರನೇ ಪರೀಕ್ಷಾ-ಹಾರಾಟವಾಗಿದೆ. ಈ ಬೆಳವಣಿಗೆ ಅಮೆರಿಕ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಏಕೆಂದರೆ ಅಮೆರಿಕದಲ್ಲಿ ಇನ್ನು ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಅಮೆರಿಕದ ಬೈಡನ್ ಆಡಳಿತಕ್ಕೆ ಚಾಲೆಂಜ್ ಎದುರಾಗಿದೆ.
ಇದನ್ನೂ ಓದಿ : 'ಕಡಿಮೆ ಆಹಾರ ತಿನ್ನಿ..' ಉತ್ತರ ಕೊರಿಯಾ ಜನರಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮನವಿ
ಉತ್ತರ ಕೊರಿಯಾ ಸೋಮವಾರ ಉಡಾವಣೆ ಮಾಡಿದ ಹ್ವಾಸಾಂಗ್-18 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯು ಉತ್ತರ ಕೊರಿಯಾದ ಅತ್ಯಂತ ಸಶಕ್ತ ಶಸ್ತ್ರಾಸ್ತ್ರವೆಂದು ಪರಿಗಣಿಸಲ್ಪಟ್ಟಿದೆ. ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇದು 6,518 ಕಿ.ಮೀ ಎತ್ತರದಲ್ಲಿ ಚಲಿಸಿದ್ದು, 73 ನಿಮಿಷದಲ್ಲಿ 1,002 ಕಿ.ಮೀ ದೂರ ಕ್ರಮಿಸಿ ಪೂರ್ವ ಕರಾವಳಿಯ ನಿಗದಿತ ಗುರಿಗೆ ಅಪ್ಪಳಿಸಿದೆ. ಈ ಯಶಸ್ವಿ ಪ್ರಯೋಗದ ಬಗ್ಗೆ ಅಧ್ಯಕ್ಷರು ತೃಪ್ತಿ ವ್ಯಕ್ತಪಡಿಸಿದ್ದು, ನಮ್ಮ ವಿರುದ್ಧ ದಾಳಿ ನಡೆಸುವ ಮೊದಲು ಶತ್ರುಗಳು ಮತ್ತೊಮ್ಮೆ ಯೋಚನೆ ಮಾಡುವಂತಾಗಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.