ಜೆರುಸಲೇಂ: ಕಳೆದ ಹಲವು ದಿನಗಳಿಂದ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಕದನ ವಿರಾಮದ ಬಗ್ಗೆ ಹಲವು ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾತ್ಕಾಲಿಕ ಕದನ ವಿರಾಮದ ಮಾತುಕತೆಗಳ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಮತ್ತೊಮ್ಮೆ ಗಾಜಾದಲ್ಲಿ ಕದನ ವಿರಾಮದ ಸಾಧ್ಯತೆಯನ್ನು ಅಲ್ಲಗಳೆದರು.
"ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳಿಗೆ ಕೊನೆ ಹಾಡಲು ಬಯಸುತ್ತೇನೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯಾವುದೇ ಕದನ ವಿರಾಮ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಿದ್ದೇನೆ" ಎಂದು ನೆತನ್ಯಾಹು ಹೇಳಿದರು.
ಒತ್ತೆಯಾಳುಗಳ ಬಿಡುಗಡೆಯಾಗದೆ ಕದನ ವಿರಾಮ ಇಲ್ಲ: ಹಮಾಸ್ ಉಗ್ರರು ಅಪಹರಿಸಿರುವ ಆರು ಮಂದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿವೆ. ಈ ನಡುವೆ ಕದನ ವಿರಾಮದ ಬಗ್ಗೆ ಮಾತನಾಡಿದ ಪ್ರಧಾನಿ, ನಾವು ಎಲ್ಲಾ ಮೂಲಗಳಿಂದ ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳನ್ನು ಕೊನೆಗೊಳಿಸುತ್ತಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಘೋಷಿಸುವುದಿಲ್ಲ ಎಂದಿದ್ದಾರೆ.
ಹಮಾಸ್ ಸುರಂಗಗಳ ನಾಶ: ನಾವು ಹಮಾಸ್ ಅನ್ನು ಗೆಲ್ಲಲು ಬಿಡುವುದಿಲ್ಲ. ನಾವು ದಕ್ಷಿಣ ಇಸ್ರೇಲ್ನಲ್ಲಿ ನಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುತ್ತೇವೆ. ನಮ್ಮ ಜೀವನವನ್ನು ಮುಂದುವರಿಸುತ್ತೇವೆ. ಭೂ ಆಕ್ರಮಣದ ಆರಂಭದಿಂದಲೂ ಗಾಜಾದಲ್ಲಿ 130ಕ್ಕೂ ಹೆಚ್ಚು ಹಮಾಸ್ ಸುರಂಗಗಳನ್ನು ನಾಶಪಡಿಸಲಾಗಿದೆ. ಕಮಾಂಡ್ ಸೆಂಟರ್‌ಗಳಂತಹ ಇತರ ಭೂಗತ ಹಮಾಸ್ ಮೂಲಸೌಕರ್ಯಗಳನ್ನೂ ಸಹ ನಾಶಪಡಿಸಲಾಗಿದೆ ಎಂದು ಐಡಿಎಫ್ (ಇಸ್ರೇಲ್ ಸೇನೆ) ತಿಳಿಸಿದೆ.
ಉತ್ತರ ಗಾಜಾದಿಂದ ದಕ್ಷಿಣ ಭಾಗಕ್ಕೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ವಲಸೆ ಹೋಗುತ್ತಿದ್ದಾರೆ. ಉತ್ತರ ಗಾಜಾದ ನಿವಾಸಿಗಳಿಗೆ ಹೋರಾಟದಿಂದ ದೂರವಿರಲು ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಕರೆ ನೀಡಿದೆ. ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹಮಾಸ್ ಆರೋಪಿಸಿದೆ.
UNRWA ಮತ್ತು ಅದರ ಅಧಿಕಾರಿಗಳು ಈ ಮಾನವೀಯ ದುರಂತಕ್ಕೆ ಜವಾಬ್ದಾರರು. ಉತ್ತರದ ಗಾಜಾ ನಗರ ಪ್ರದೇಶದ ನಿವಾಸಿಗಳು ದಕ್ಷಿಣಕ್ಕೆ ಪಲಾಯನ ಮಾಡಲು ಇಸ್ರೇಲ್ ಸೇನೆ ವ್ಯವಸ್ಥೆ ಕಲ್ಪಿಸಿದ ಮಾರ್ಗಗಳಲ್ಲಿ ಹೋಗುತ್ತಿದ್ದಾರೆ ಎಂದು ಹಮಾಸ್ ವಕ್ತಾರ ಸಲಾಮಾ ಮಾರುಫ್ ತಿಳಿಸಿದ್ದಾರೆ.
ಹಮಾಸ್ ರಸ್ತೆಗಳನ್ನು ನಿರ್ಬಂಧಿಸಿದೆ. ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೀನಿಯರ ಮೇಲೆ ಗುಂಡು ಹಾರಿಸಿದೆ. ಹಮಾಸ್ ವಿರುದ್ಧ ಯುದ್ಧದ ನಂತರ ಅನಿರ್ದಿಷ್ಟಾವಧಿಯವರೆಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭದ್ರತಾ ಹೊಣೆಗಾರಿಕೆ ಹೊಂದಿರುತ್ತದೆ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.
ಈಗಾಗಲೇ ಗಾಜಾದಲ್ಲಿ ಸಾವಿನ ಸಂಖ್ಯೆ 10 ಸಾವಿರ ದಾಟಿದೆ ಎನ್ನಲಾಗುತ್ತಿದೆ. ಆದರೆ ಮೃತರಲ್ಲಿ ಯೋಧರು ಮತ್ತು ನಾಗರಿಕರ ಸಂಖ್ಯೆಯನ್ನು ಸಚಿವಾಲಯ ಬಹಿರಂಗಪಡಿಸುತ್ತಿಲ್ಲ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,400 ಇಸ್ರೇಲ್ ಜನರು ಸಾವನ್ನಪ್ಪಿದ್ದರು. ಈ ದಾಳಿಯ ನಂತರ ಯುದ್ಧ ಪ್ರಾರಂಭವಾಗಿದೆ. ಇಸ್ರೇಲ್ ಸ್ಥಾಪನೆಯ ನಂತರ ಕಳೆದ 75 ವರ್ಷಗಳಲ್ಲಿ ಅತ್ಯಂತ ವಿನಾಶಕಾರಿ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ನಡೆಯುತ್ತಿದೆ.
ಇದನ್ನೂ ಓದಿ: ಗಾಜಾ ನಗರದಲ್ಲಿ ಹಮಾಸ್ ಭದ್ರಕೋಟೆಯತ್ತ ಇಸ್ರೇಲ್ ಪಡೆಗಳು