ಕೀವ್(ಉಕ್ರೇನ್): ರಷ್ಯಾ ದಾಳಿಯಿಂದ ಉಕ್ರೇನ್ ಅಕ್ಷರಶಃ ನರಕಸದೃಶ್ಯವಾಗಿದೆ. ರಾಜಧಾನಿ ಕೀವ್ ಸುತ್ತಮುತ್ತಲಿನ ಪ್ರದೇಶದಲ್ಲಿ 900 ಕ್ಕೂ ಹೆಚ್ಚು ನಾಗರಿಕರ ಮೃತದೇಹಗಳು ಪತ್ತೆಯಾಗಿವೆ. ಅವರಲ್ಲಿ ಹೆಚ್ಚಿನವರು ಗುಂಡೇಟಿಗೇ ಬಲಿಯಾಗಿರುವುದು ಕಂಡು ಬಂದಿದೆ. ಇದು ರಷ್ಯಾದ ಪಡೆಗಳ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ ಎಂದು ಉಕ್ರೇನ್ ಆರೋಪಿಸಿದೆ.
ರಷ್ಯಾದ ಭೂಪ್ರದೇಶದ ಮೇಲೆ ದಾಳಿ ಮಾಡಿದ್ದ ಉಕ್ರೇನ್ ಯುದ್ಧ ನೌಕೆಯನ್ನು ಹೊಡೆದುರುಳಿಸಿತ್ತು. ಇದರಿಂದ ಕೆರಳಿರುವ ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಕೀವ್ ಮೇಲೆ ಸತತವಾಗಿ ಕ್ಷಿಪಣಿ ದಾಳಿಯನ್ನು ಮುಂದುವರಿಸಿದೆ. ಕ್ಷಿಪಣಿ ದಾಳಿಯಿಂದಲೂ ಹಲವಾರು ಉಕ್ರೇನ್ ನಾಗರಿಕರು ಹತರಾಗಿದ್ದಾರೆ ಎಂದು ಯುಎಸ್ನ ಹಿರಿಯ ರಕ್ಷಣಾ ಅಧಿಕಾರಿ ಹೇಳಿದ್ದಾರೆ.
ದಕ್ಷಿಣದ ಬಂದರು ನಗರವಾದ ಮರಿಯುಪೋಲ್‌ನಲ್ಲಿಯೂ ಸಹ ದಾಳಿ ಮುಂದುವರಿದಿದೆ. ಅಲ್ಲಿ ರಷ್ಯಾದ ಪಡೆಗಳು ನಾಗರಿಕರ ಮೇಲೆ ದಾಳಿ ಮಾಡುತ್ತಿರುವುದನ್ನು ಅಲ್ಲಿಯ ಸ್ಥಳೀಯರೇ ಮಾಹಿತಿ ನೀಡಿದ್ದಾರೆ. ಈಶಾನ್ಯ ನಗರವಾದ ಖಾರ್ಕಿವ್‌ನಲ್ಲಿ ವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿ ನಡೆಸಿದ್ದರಿಂದ 7 ತಿಂಗಳ ಮಗು ಸೇರಿದಂತೆ 7 ಜನರು ಹತರಾಗಿದ್ದಾರೆ. ಇದರಲ್ಲಿ 34 ಮಂದಿ ಗಾಯಗೊಂಡಿದ್ದಾರೆ.
ಓದಿ: ಉಕ್ರೇನ್ಗೆ ಮಿಲಿಟರಿ ನೆರವು ನಿಲ್ಲಿಸದಿದ್ದರೆ ಪರಿಣಾಮ ನೆಟ್ಟಗಿರದು.. ಅಮೆರಿಕಕ್ಕೆ ರಷ್ಯಾ ವಾರ್ನಿಂಗ್