ಕೀವ್(ಉಕ್ರೇನ್): ರಷ್ಯಾ ಸೇನೆ ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಪೂರ್ವ ಉಕ್ರೇನ್‌ನ ರೈಲು ನಿಲ್ದಾಣವೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಸುಮಾರು 52 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಈ ರೈಲು ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು ಎಂದು ತಿಳಿದುಬಂದಿದೆ. ಅದರಲ್ಲಿ ಉಕ್ರೇನ್ನಿಂದ ಬೇರೆಡೆಗೆ ಸ್ಥಳಾಂತರವಾಗಲು ರೈಲು ನಿಲ್ದಾಣದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಉಕ್ರೇನ್ ನಗರವಾದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಆರೋಪಿಸುತ್ತಿದ್ದು, ಈ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ರಷ್ಯಾ ಸ್ಪಷ್ಟನೆ ನೀಡಿದೆ. ನಾಗರಿಕರನ್ನು ನಾವು ಗುರಿಯಾಗಿಸಿಕೊಂಡಿಲ್ಲ. ನಾಗರಿಕರ ಮೇಲೆ ದಾಳಿಗಳನ್ನು ನಡೆಸುತ್ತಿಲ್ಲ ಎಂದೇ ರಷ್ಯಾ ಹೇಳುತ್ತಿದೆ. ರೈಲು ನಿಲ್ದಾಣದ ಮೇಲೆ ದಾಳಿಯಂಥಹ ಸಾಕ್ಷ್ಯಗಳಿದ್ದರೂ, ರಷ್ಯಾ ನಾಗರಿಕರ ಮೇಲಿನ ದಾಳಿಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಕ್ರಾಮಾಟೋರ್ಸ್ಕ್‌ನ ದಾಳಿಯ ಬಗ್ಗೆ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೃತರನ್ನು ಟಾರ್ಪಲ್ಗಳಿಂದ ಮುಚ್ಚಿರುವ, ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜಿನ ಜೊತೆಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿರುವ, ರಾಕೆಟ್ನ ಅವಶೇಷಗಳು 'ಮಕ್ಕಳಿಗಾಗಿ' ಎಂದು ಬರೆದಿರುವ ಫೋಟೋಗಳು ವೈರಲ್ ಆಗಿವೆ. ಇದರ ಜೊತೆಗೆ ರಾಕೆಟ್ ದಾಳಿಯ ವೇಳೆ ಇಬ್ಬರು ಮಕ್ಕಳೊಂದಿಗೆ ಪೋಷಕರು ರೈಲು ನಿಲ್ದಾಣದಲ್ಲಿ ನಿಂತಿರುವ ವ್ಯಂಗ್ಯಚಿತ್ರ ಮನಮಿಡಿಯುವಂತಿದೆ.
ಉಕ್ರೇನ್‌ನ ಉತ್ತರದಲ್ಲಿದ್ದ ರಷ್ಯಾದ ಪಡೆಗಳನ್ನು ಹಿಂತೆಗೆದುಕೊಂಡಿದ್ದು, ಅವುಗಳಲ್ಲಿ ಕೆಲವನ್ನು ಪೂರ್ವ ಡಾನ್‌ಬಾಸ್ ಪ್ರದೇಶಕ್ಕೆ ವರ್ಗಾಯಿಸಲಾಗುವುದು ಎಂದು ಬ್ರಿಟನ್ನ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಪಡೆಗಳ ಸ್ಥಳಾಂತರ ಕೂಡಾ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ರಷ್ಯಾವು ಈ ರೀತಿಯಾಗಿ ಸೇನಾ ಪಡೆಗಳನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಡಾನ್ಬಾಸ್ನಲ್ಲಿ ದಾಳಿಯ ಪ್ರಮಾಣ ಇನ್ನೂ ಕ್ರೂರವಾಗಿರಬಹುದು ಎಂದು ಉಕ್ರೇನ್ ನಾಯಕರು ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿರುವ ನಾಗರಿಕರನ್ನು ಸ್ಥಳಾಂತರ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಚೋಪ್ರಾ ಕರೆ