ಪೆನ್ಸಿಲ್ವೇನಿಯಾ(ಅಮೆರಿಕ): ಅಮೆರಿಕ ಅಧ್ಯಕ್ಷರ ಕಚೇರಿ ಶ್ವೇತಭವನದ ಹೊರಗೆ ಸಿಡಿಲು ಬಡಿದು ಮೂವರು ಮೃತಪಟ್ಟರೆ, ಪೆನ್ಸಿಲ್ವೇನಿಯಾದಲ್ಲಿ ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ 10 ಮಂದಿ ಸಜೀವ ದಹನವಾದ ದಾರುಣ ಘಟನೆ ನಡೆದಿದೆ.
ಅಮೆರಿಕ ಅಧ್ಯಕ್ಷರ ಕಚೇರಿಯ ಹೊರಭಾಗದಲ್ಲಿರುವ ಲಫಯೆಟ್ಟೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಭಾರೀ ಪ್ರಮಾಣದ ಸಿಡಿಲು ಬಡಿದಿದೆ. ಇದರಿಂದ ಇಬ್ಬರು ಪುರುಷರು, ಇಬ್ಬರು ಮಹಿಳೆಯರಿಗೆ ಸಿಡಿಲು ಬಡಿದಿದೆ. ಇದರಲ್ಲಿ ಇಬ್ಬರು ಮಹಿಳೆಯರು, ಪುರುಷ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ತೀವ್ರ ಗಾಯಗೊಂಡ ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಪಾರ್ಕ್ ಅನ್ನು ಬಂದ್ ಮಾಡಲಾಗಿದೆ.
ಕುಟುಂಬ ಬಲಿ ಪಡೆದ ಅಗ್ನಿ: ಪೆನ್ಸಿಲ್ವೇನಿಯಾದಲ್ಲಿ 2 ಅಂತಸ್ತಿನ ಮನೆಗೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ 3 ಮಕ್ಕಳು ಸೇರಿ 10 ಜನರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿದ್ದ 13 ಸಾಕು ನಾಯಿಗಳು ಇನ್ನೂ ಪತ್ತೆಯಾಗಿಲ್ಲ. ಧಗ ಧಗಿಸುತ್ತಿರುವ ಅಗ್ನಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಶುಕ್ರವಾರ ಬೆಳಗಿನ ಜಾವ 2:30 ರ ವೇಳೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ದೊಡ್ಡ ಸದ್ದು ಕೇಳಿದ ಮನೆಯಲ್ಲಿದ್ದ ಮೂವರು ಹೊರಬಂದು ನೋಡಿದಾಗ ಬೆಂಕಿ ಹೊತ್ತಿಕೊಳ್ಳುವುದು ಗೊತ್ತಾಗಿದೆ. ತಕ್ಷಣವೇ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಉಳಿದವರು ತಪ್ಪಿಸಿಕೊಳ್ಳುವ ಮೊದಲೇ ಇಡೀ ಮನೆಗೆ ಬೆಂಕಿ ಆವರಿಸಿದೆ. ನೆರೆಹೊರೆಯವರು ಇದನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯ ಜ್ವಾಲೆಯನ್ನು ತಣಿಸಲು ಪರದಾಡಿದ್ದಾರೆ.
ಮನೆಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಎಲ್ಲರೂ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದು, ದುರಂತಕ್ಕೆ ಕಾರಣವಾಗಿದೆ. ಮೃತರಲ್ಲಿ ಓರ್ವರು ಅಗ್ನಿಶಾಮಕ ಸಿಬ್ಬಂದಿಯಾಗಿದ್ದರು ಎಂಬುದು ವಿಶೇಷ. ಘಟನೆಯಲ್ಲಿ 10 ವರ್ಷದ ಬಾಲಕನಿಂದ 70 ವರ್ಷದ ವೃದ್ಧರೂ ಇದ್ದಾರೆ. ಓರ್ವ ವ್ಯಕ್ತಿ ಪತ್ರಿಕೆ ಹಾಕಲು ಹೊರಹೋಗಿದ್ದ. ಇನ್ನು ಮೂವರು ಬಚಾವಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ; ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು.. ಬದುಕಿ ಬಂದು ಯಜಮಾನನ ಮಡಿಲು ಸೇರಿದ ನಾಯಿಗಳು!