ಬೀಜಿಂಗ್: ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 17 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿಚುವಾನ್ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 5 ರಂದು ಸಂಭವಿಸಿದ 6.8 ತೀವ್ರತೆಯ ಭೂಕಂಪದ ನಂತರ 28 ವರ್ಷದ ಜಲ ವಿದ್ಯುತ್ ಕೇಂದ್ರದ ಉದ್ಯೋಗಿ ಗ್ಯಾನ್ ಯು ಮತ್ತೊಬ್ಬ ಸಹೋದ್ಯೋಗಿ ಲುವೊ ಯೋಂಗ್ ನಾಪತ್ತೆಯಾಗಿದ್ದರು. ಭೂಕಂಪದ ನಂತರ ಗ್ಯಾನ್ ಮತ್ತು ಸಹೋದ್ಯೋಗಿ 12 ಮೈಲುಗಳಿಗಿಂತ ಹೆಚ್ಚು ದೂರ ಪರ್ವತದ ಭೂಪ್ರದೇಶದಲ್ಲಿ ನಡೆದುಕೊಂಡು ಹೋಗಿದ್ದಾರೆ.
ಆದರೆ, ದೂರದೃಷ್ಟಿಯುಳ್ಳ ಗ್ಯಾನ್ ತನ್ನ ಕನ್ನಡಕವನ್ನು ಕಳೆದುಕೊಂಡ ಹಿನ್ನೆಲೆ ಪರ್ವತ ಪ್ರದೇಶದಲ್ಲಿ ಸಂಚರಿಸಲು ಕಷ್ಟಪಪಟ್ಟಿದ್ದಾರೆ. ಈ ವೇಳೆ ಲುವೊ ಸಹಾಯವನ್ನು ಹುಡುಕುತ್ತಾ ಮುಂದೆ ಸಾಗಿದ್ದು, ಬಳಿಕ ರಕ್ಷಕರು ಸೆಪ್ಟೆಂಬರ್ 8 ರಂದು ಲುವೊನನ್ನು ಪತ್ತೆಹಚ್ಚಿದರು. ಬಳಿಕ ಗ್ಯಾನ್ ಯು ನಾಪತ್ತೆಯಾದ ಪ್ರದೇಶಕ್ಕೆ ವಾಪಸ್ ಬಂದು ನೋಡಿದಾಗ ಆತ ಕಾಣೆಯಾಗಿದ್ದ.
ಇದನ್ನೂ ಓದಿ: ಚೀನಾದಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ
ಕಾಡಿನಲ್ಲಿ ದೊರೆತ ಹಣ್ಣುಗಳನ್ನು ತಿಂದು, ನೀರು ಕುಡಿಯುವ ಮೂಲಕ 17 ದಿನಗಳ ಅಗ್ನಿಪರೀಕ್ಷೆ ಎದುರಿಸಿ ಬದುಕುಳಿದ್ದಾರೆ. ಕಾಡಿನಲ್ಲಿ ಗ್ಯಾನ್ ಕೂಗುತ್ತಿರುವ ಧ್ವನಿಯನ್ನ ಕೇಳಿ ರೈತರೊಬ್ಬರು ಆತನನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹಲವಾರು ಮೂಳೆ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಭೂಕಂಪದಲ್ಲಿ 93 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು.