ನವದೆಹಲಿ: "ಭಾರತ ಹಳೆಯ ಮತ್ತು ನಂಬಿಕಸ್ಥ ನೆರೆಹೊರೆಯ ದೇಶ. ಅದರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕೇ ಹೊರತು, ವಿರುದ್ಧ ಹೋಗುವ ಕಾಲ ಇದಲ್ಲ. ಮಾಲ್ಡೀವ್ಸ್ ಸರ್ಕಾರ ಮೂರ್ಖತನದ ಹೆಜ್ಜೆ ಇಡುತ್ತಿದೆ" ಎಂದು ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಹೇಳಿದ್ದಾರೆ.
"ಅಧ್ಯಕ್ಷ ಮೊಹಮದ್ ಮುಯಿಝು ರಾಜಕೀಯ ವಿರೋಧಕ್ಕಾಗಿ ಚೀನಾದ ಬಲೆಗೆ ಬೀಳುತ್ತಿದ್ದಾರೆ. ಮುಂದೊಂದು ದಿನ ಶ್ರೀಲಂಕಾದಂತೆ ಮಾಲ್ಡೀವ್ಸ್ ಕೂಡ ಚೀನಾ ಕೈಗೊಂಬೆಯಾಗಲಿದೆ. ಈಗಾಗಲೇ ದೇಶದ ಸಾಲ ವಿಪರೀತವಾಗಿದೆ. ಅದನ್ನು ಮುಯಿಝು ಸರ್ಕಾರ ತೀರಿಸುವ ಯತ್ನ ಮಾಡಬೇಕೇ ಹೊರತು ಬಲಿಷ್ಠ ರಾಷ್ಟ್ರಗಳ ಜೊತೆ ಕದನಕ್ಕಿಳಿಯುವುದಲ್ಲ" ಎಂದು ಅವರು ಬುದ್ಧಿವಾದ ಹೇಳಿದರು.
- " class="align-text-top noRightClick twitterSection" data="">
ಭಾರತದೊಂದಿಗೆ ವಿರೋಧ ಮೂರ್ಖತನ: "ಭಾರತ ನೆರೆಯ ರಾಷ್ಟ್ರ. ಅದರ ಜೊತೆಗಿನ ಸಾಂಪ್ರದಾಯಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಅಗತ್ಯ. ಇದಕ್ಕೆ ಮಿಗಿಲಾಗಿ ಭಾರತದ ವಿರುದ್ಧ ಹೋಗುವುದು ಸಂಪೂರ್ಣ ಮೂರ್ಖತನವಾಗಿದೆ. ರಾಜಕೀಯ ವಿಚಾರಗಳಿಗಾಗಿ ಅಧ್ಯಕ್ಷರು ಮಾಲ್ಡೀವ್ಸ್ ಅನ್ನು ಭಾರತದ ವಿರುದ್ಧ ನಿಲ್ಲಿಸುತ್ತಿದ್ದಾರೆ. ಇದು ದುರದೃಷ್ಟಕರ. ಮಾಲೆಗೆ ಎಂದಿಗಿಂತಲೂ ಈಗ ಭಾರತದ ನೆರವಿನ ಅಗತ್ಯವಿದೆ" ಎಂದು ಅವರು ಅಭಿಪ್ರಾಯಪಟ್ಟರು.
"ಕೋವಿಡ್ ನಂತರ, ಚೀನಾ ಇನ್ನೂ ಚೇತರಿಸಿಕೊಂಡಿಲ್ಲ. ಮಾಲ್ಡೀವ್ಸ್ಗೆ ಚೀನಾದಿಂದ ಬರುವ ಪ್ರವಾಸಿಗರೂ ಕಡಿಮೆಯೇ. ಹೀಗಿದ್ದಾಗ, ಮುಯಿಝು ತನ್ನ ನೀತಿಯನ್ನು ಭಾರತದ ವಿರುದ್ಧ ಚಲಾಯಿಸುತ್ತಿದ್ದಾರೆ. ಪಕ್ಷದಲ್ಲಿನ ಕೆಲವರನ್ನು ಸಮಾಧಾನಪಡಿಸಲು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ ದೇಶಕ್ಕೆ ಅಪಾಯ" ಎಂದು ಅದೀಮ್ ಎಚ್ಚರಿಸಿದ್ದಾರೆ.
ಸೋಲಿನ ಜೂಜು: "ಅಧ್ಯಕ್ಷ ಮುಯಿಜು ದೊಡ್ಡ ಜೂಜಾಟ ಆರಂಭಿಸಿದ್ದಾರೆ. ಆದರೆ, ಇದು 'ಸೋಲುವ ಜೂಜು'. ಭಾರತದಂತಹ ವಿಶ್ವಾಸಾರ್ಹ ಪಾಲುದಾರನನ್ನು ಎದುರು ಹಾಕಿಕೊಳ್ಳುವುದು ತಕ್ಕುದಲ್ಲ. ಅಧ್ಯಕ್ಷರಾದ ಬಳಿಕ ಅವರು ಮೊದಲು ಭಾರತಕ್ಕೆ ಭೇಟಿ ನೀಡಬೇಕಿತ್ತು. ವಿದೇಶಾಂಗ ನೀತಿಯನ್ನು ಇನ್ನಷ್ಟು ಬಲಪಡಿಸಬೇಕಿತ್ತು. ನೆರೆರಾಷ್ಟ್ರದ ಜೊತೆಗೆ ಉತ್ತಮ ಸಂಬಂಧ ಹೊಂದಬೇಕು. ಮಾಲ್ಡೀವ್ಸ್, ಭಾರತದ ಮೇಲೆ ಅವಲಂಬನೆಯಾಗುವುದು ಸುರಕ್ಷಿತವಾಗಿರುತ್ತದೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಸಚಿವರ ವಿರುದ್ಧ ಕಠಿಣ ಕ್ರಮವಾಗಬೇಕು. ಜೊತೆಗೆ ಸರ್ಕಾರ ಮೋದಿ ಅವರ ಕ್ಷಮೆ ಕೋರಬೇಕು. ತಕ್ಷಣವೇ ಅವರನ್ನು ಮಾಲ್ಡೀವ್ಸ್ ಅಧ್ಯಕ್ಷರು ಭೇಟಿ ಮಾಡಬೇಕು. ಪರಿಸ್ಥಿತಿ ಬಿಗಡಾಯಿಸುವ ಮುನ್ನ ರಾಜತಾಂತ್ರಿಕ ಬಿಕ್ಕಟ್ಟನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ದೇಶ ಮತ್ತು ಅದರ ಆರ್ಥಿಕತೆಗೆ ಅಪಾಯ ಕಟ್ಟಿಟ್ಟ ಬುತ್ತಿ" ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ವಿರುದ್ಧ ಮಾಲ್ಡೀವ್ಸ್ನ ಮೂವರು ಸಚಿವರು ಆಕ್ಷೇಪಾರ್ಹ ಟೀಕೆ ಮಾಡಿದ ಬಳಿಕ, ಉಭಯ ರಾಷ್ಟ್ರಗಳ ನಡುವೆ ತೀವ್ರ ಬಿಕ್ಕಟ್ಟು ಉಂಟಾದ ನಡುವೆಯೂ ಅಧ್ಯಕ್ಷ ಮೊಹಮದ್ ಮುಯಿಝು ಚೀನಾಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ಸಚಿವರ ಹೇಳಿಕೆ ವೈಯಕ್ತಿಕ ಎಂದು ಕೈತೊಳೆದುಕೊಂಡಿದ್ದಾರೆ. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಭಾರತದ ಬಹಿಷ್ಕಾರಕ್ಕೆ ಬೆದರಿದ ಮಾಲ್ಡೀವ್ಸ್: ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಕ್ಕೆ ಮೊರೆ