ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತಹ್ರೀಕ್ ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಬಂಧನ ಕಾರ್ಯಾಚರಣೆಗೆ ಲಾಹೋರ್ ಹೈಕೋರ್ಟ್ ತಡೆ ನೀಡಿದೆ. ನಾಳೆ (ಗುರುವಾರ) ಬೆಳಗ್ಗೆ 10 ಗಂಟೆಯವರೆಗೆ ಇಮ್ರಾನ್ ಖಾನ್ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆ ಬೆನ್ನಲ್ಲೇ ನ್ಯಾಯಾಲಯ ಈ ಸೂಚನೆ ನೀಡಿದೆ.
ಉಡುಗೊರೆಯಾಗಿ ಬಂದ ವಸ್ತುಗಳನ್ನು ಮಾರಾಟ ಮಾಡಿದ ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಮಂಗಳವಾರದಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇಮ್ರಾನ್ ನಿವಾಸ 'ಜಮಾನ್ ಪಾರ್ಕ್' ಹೊರಗೆ ಪಿಟಿಐ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇದರಿಂದ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದೆ.
ಮತ್ತೊಂದೆಡೆ, ಜಮಾನ್ ಪಾರ್ಕ್‌ನ ಹೊರಗಿನ ದೌರ್ಜನ್ಯವನ್ನು ತಡೆಯುವಂತೆ ಕೋರಿ ಪಿಟಿಐ ನಾಯಕ ಫವಾದ್ ಚೌಧರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಾಳೆ ಬೆಳಗ್ಗೆ 10 ಗಂಟೆಯವರೆಗೆ ಬಂಧನ ಕಾರ್ಯಾಚರಣೆಗೆ ತಡೆ ನೀಡಿದ್ದಾರೆ. ಅಲ್ಲದೇ, ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಕ್ರಿಕೆಟ್ ಟೂರ್ನಿ ಮುಗಿಯುವವರೆಗೆ ಪೊಲೀಸರು ಖಾನ್ ಅವರ ನಿವಾಸಕ್ಕೆ ತೆರಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನಿಡಿದ್ದಾರೆ ಎಂದು ವರದಿಯಾಗಿದೆ.
ನಿವಾಸದಿಂದ ಹೊರಬಂದ ಇಮ್ರಾನ್ ಖಾನ್: ತಮ್ಮ ನಾಯಕ ಇಮ್ರಾನ್ ಖಾನ್ ಬಂಧನದಿಂದ ತನಿಖಾ ಸಂಸ್ಥೆಗಳು ಹಿಂದೆ ಸರಿಯುತ್ತಿದ್ದಂತೆ ಪಿಟಿಐ ಕಾರ್ಯಕರ್ತರು ಜಮಾನ್ ಪಾರ್ಕ್‌ನ ಹೊರಗೆ ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಇಮ್ರಾನ್ ಖಾನ್ ತಮ್ಮ ನಿವಾಸದಿಂದ ಹೊರಬಂದು ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಈ ವಿಡಿಯೋವನ್ನು ಪಕ್ಷದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದಕ್ಕೂ ಮುನ್ನ ಬುಧವಾರ ಬೆಳಗ್ಗೆ ಇಸ್ಲಾಮಾಬಾದ್ ಪೊಲೀಸರು, ಪಂಜಾಬ್ ಪೊಲೀಸ್ ಮತ್ತು ರೇಂಜರ್‌ಗಳ ಬೆಂಬಲದೊಂದಿಗೆ ಮಾಜಿ ಪ್ರಧಾನಿ ಅವರನ್ನು ಬಂಧಿಸುವ ಕಾರ್ಯಾಚರಣೆಯನ್ನು ಪುನಾರಂಭಿಸಿದ್ದರು. ಆದರೆ, ನ್ಯಾಯಾಲಯವು ತನ್ನ ವಿಚಾರಣೆ ಸಂದರ್ಭದಲ್ಲಿ ಪಂಜಾಬ್ ಇನ್ಸ್‌ಪೆಕ್ಟರ್ ಜನರಲ್, ಮುಖ್ಯ ಕಾರ್ಯದರ್ಶಿ ಮತ್ತು ಇಸ್ಲಾಮಾಬಾದ್ ಪೊಲೀಸ್ (ಕಾರ್ಯಾಚರಣೆ) ಮುಖ್ಯಸ್ಥರಿಗೆ ಮಧ್ಯಾಹ್ನ 3 ಗಂಟೆಯೊಳಗೆ ಹಾಜರಾಗುವಂತೆ ಸೂಚಿಸಿತ್ತು. ನಂತರ ಬಂಧನಕ್ಕೆ ತಡೆ ನೀಡಿ ಆದೇಶಿಸಿತ್ತು.
ರಾತ್ರಿಯಿಡೀ ಘರ್ಷಣೆ: ಇತ್ತೀಚೆಗೆ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಇಮ್ರಾನ್ ಖಾನ್ ತೋಷಖಾನಾ ಪ್ರಕರಣದ ವಿಚಾರಣೆಗೆ ಸತತವಾಗಿ ಮೂರು ಬಾರಿ ಗೈರಾಗಿದ್ದರು. ಆದ್ದರಿಂದ ನ್ಯಾಯಾಲಯವು ಇಮ್ರಾನ್ ಅವರನ್ನು ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಅಂತೆಯೇ ಪೊಲೀಸರು ಬಂಧನ ಕಾರ್ಯಾಚರಣೆ ಶುರು ಮಾಡಿದ್ದರು.
ಇದರ ನಡುವೆ ಇಮ್ರಾನ್ ಖಾನ್ ಬಂಧನಕ್ಕೆ ಪೊಲೀಸರು ಸಸತ ಪ್ರಯತ್ನ ಮಾಡುತ್ತಿದ್ದಾಗಲೇ ಪಿಟಿಐ ಕಾರ್ಯಕರ್ತರು ಜಮಾನ್ ಪಾರ್ಕ್ ನಿವಾಸದ ಮುಂದೆ ಜಮಾವಣೆಗೊಂಡಿದ್ದರು. ಪಿಟಿಐ ಬೆಂಬಲಿಗರು ಮಂಗಳವಾರ ರಾತ್ರಿಯಿಡೀ ಪೊಲೀಸರೊಂದಿಗೆ ಪದೇ ಪದೇ ಘರ್ಷಣೆಗೂ ಇಳಿದಿದ್ದರು. ಇದೇ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದರು. ಅಲ್ಲದೇ, ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಕೂಡ ಮಾಡಿದ್ದರು.
ಇದನ್ನೂ ಓದಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಬಂಧನ ಭೀತಿ