ಕೀವ್(ಉಕ್ರೇನ್): ರಷ್ಯಾ ವಿರುದ್ಧ ಹೋರಾಡಲು ನ್ಯಾಟೋದಲ್ಲಿರುವ ಒಟ್ಟು ಯುದ್ಧ ವಿಮಾನಗಳು, ಟ್ಯಾಂಕ್ಗಳಲ್ಲಿ ಶೇಕಡಾ ಒಂದರಷ್ಟನ್ನು ನಮಗೆ ನೀಡಿದರೆ ಸಾಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಹೇಳಿದ್ದಾರೆ. ನಾವು ಇನ್ನೇನೂ ಕೇಳುತ್ತಿಲ್ಲ. ನಮಗಿಷ್ಟು ಸಹಕಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
ಟೆಲಿಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು, ಉಕ್ರೇನ್ಗೆ ಮಿಲಿಟರಿ ಸಹಾಯ ನೀಡುವ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಒಮ್ಮತವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರ ಜೊತೆಗೆ, ಹಂಗೇರಿಯು ಉಕ್ರೇನ್ಗೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿರಾಕರಿಸಿದ್ದು ಝೆಲೆನ್ಸ್ಕಿ ಚಿಂತೆ ಹೆಚ್ಚಿಸಿದೆ.
ಕೆಲವು ದಿನಗಳ ಹಿಂದೆ ನಡೆದ ನ್ಯಾಟೋ ಶೃಂಗಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಝೆಲೆನ್ಸ್ಕಿ, 'ಈ ಶೃಂಗಸಭೆ ಬಹಳ ನಿರಾಶಾದಾಯಕವಾಗಿದೆ. ನ್ಯಾಟೋ ಒಕ್ಕೂಟವು ಹೆಚ್ಚಿನ ಧೈರ್ಯ ತೋರಿಸುತ್ತದೆ ಮತ್ತು ರಷ್ಯಾವನ್ನು ಎದುರಿಸಲು ಹೆಚ್ಚುವರಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಉಕ್ರೇನ್ ನಿರೀಕ್ಷೆ ಇಟ್ಟುಕೊಂಡಿದ್ದು ಹುಸಿಯಾಗಿದೆ ಎಂದು ದೂರಿದ್ದರು.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷರ ಪೊಲೆಂಡ್ ಭೇಟಿ: ಉಕ್ರೇನ್ನ ಎಲ್ವಿವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆದಿದ್ದು, ನಾವು ಸೈನಿಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ. ಉಕ್ರೇನ್ ವಶಕ್ಕೆ ತೆಗೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ. ನಾಗರಿಕರ ಮೇಲೂ ದಾಳಿ ನಡೆಸುತ್ತಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.