ಸಿಯೋಲ್ : ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್-ಉನ್ ಅವರ ಪುತ್ರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈಕೆ ಕಿಮ್ನ ಮೊದಲ ಮಗುವಾಗಿರಬಹುದು ಎಂದು ಹೇಳಲಾಗಿದ್ದು, ಇವಳು ಕಿಮ್ ನಂತರ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ರಾಜಕೀಯ ತಜ್ಞರ ಕೂಟವೊಂದು ಹೇಳಿದೆ. ಕಿಮ್ ಅವರ ಪುತ್ರಿಯ ಹೆಸರನ್ನು ಜು ಏ (Ju-ae) ಎಂದು ಹೇಳಲಾಗಿದೆ. ಕಿಮ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗಿದ್ದು, ಮೂರನೇ ಮಗು ಹೆಣ್ಣಾ ಅಥವಾ ಗಂಡಾ ಎಂಬುದು ಜಗತ್ತಿಗೆ ಮಾಹಿತಿ ಇಲ್ಲ.
ವೈಯಕ್ತಿಕವಾಗಿ ನನಗೆ ತಿಳಿದ ಮಟ್ಟಿಗೆ ಜು-ಎ ಕಿಮ್ ಜೊಂಗ್-ಉನ್ ಅವರ ಮೊದಲ ಮಗುವಾಗಿರುವ ಸಾಧ್ಯತೆ ಹೆಚ್ಚು. ಜು ಎ ಅವರನ್ನು ಪ್ರಸ್ತುತ ಕಿಮ್ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿದೆ ಎಂದು ಕೊಹ್ ಸುದ್ದಿಗಾರರಿಗೆ ತಿಳಿಸಿದರು. ಕೊಹ್ ಸಿಯೋಲ್‌ನಲ್ಲಿರುವ ಕೊರಿಯಾ ಇನ್ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಯುನಿಫಿಕೇಶನ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಜು ಎ ಗೆ ಸದ್ಯ 10 ವರ್ಷಗಳಾಗಿರಬಹುದು ಎಂದು ನಂಬಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಿನಿಂದ ಆಕೆ ಆಗಾಗ ಮಿಲಿಟರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖಂಡಾಂತರ ಕ್ಷಿಪಣಿಯ ಪರೀಕ್ಷೆಯ ಸಮಯದಲ್ಲಿಯೂ ಆಕೆ ತನ್ನ ತಂದೆಯೊಂದಿಗೆ ಸ್ಥಳದಲ್ಲಿ ಹಾಜರಿದ್ದಳು. ಮತ್ತೊಂದು ಮೂಲದ ಪ್ರಕಾರ, ಜು ಎ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಕೊರಿಯಾದ ಪಿತೃ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಕಾರಣದಿಂದ ಆಕೆ ಕಿಮ್ ಅವರ ಉತ್ತರಾಧಿಕಾರಿ ಆಗದೇ ಇರಬಹುದು. ಹಾಗೆಯೇ ಕಿಮ್ ಅವರ ಮೂರನೇ ಮಗು ಗಂಡು ಮಗು ಎಂಬ ವಾದಗಳ ಕಾರಣದಿಂದ ಸಹ ಜು ಎ ಉತ್ತರಾಧಿಕಾರಿ ಆಗದಿರಬಹುದು.
ಕಿಮ್ ಜೊಂಗ್-ಉನ್ ಅವರು ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ (WPK) ಅಧ್ಯಕ್ಷರಾಗಿದ್ದಾರೆ ಮತ್ತು ಉತ್ತರ ಕೊರಿಯಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ (DPRK) ಸರ್ವೋಚ್ಚ ನಾಯಕರಾಗಿದ್ದಾರೆ. ಪಕ್ಷದ ಮತ್ತು ದೇಶದ ಮುಖ್ಯಸ್ಥರಾದ ದಿನದಿಂದ ಕಿಮ್ ಅವರು ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆ ಮತ್ತು ಉತ್ತರ ಕೊರಿಯಾದ ಕ್ಷಿಪಣಿ ಕಾರ್ಯಕ್ರಮದ ಪ್ರಗತಿಗೆ ತಾವು ಬದ್ಧರಾಗಿರುವುದನ್ನು ತೋರಿಸಿದ್ದಾರೆ.
ಜುಲೈ 2012 ರಲ್ಲಿ, ಕಿಮ್ ಕಾಮ್ರೇಡ್ ರಿ ಸೋಲ್-ಜು ಅವರನ್ನು ವಿವಾಹವಾದರು ಎಂದು ದೇಶದ ಅಧಿಕೃತ ಮಾಧ್ಯಮ ಪ್ರಕಟಿಸಿತ್ತು. ಕಿಮ್ ಮತ್ತು ರಿ ವಿವಾಹದ ಬಗೆಗಿನ ವಿವರಗಳು ಸ್ಪಷ್ಟವಾಗಿಲ್ಲ. ಕಿಮ್ ಉತ್ತರ ಕೊರಿಯಾದ ನಿರಂಕುಶ ಸರ್ವಾಧಿಕಾರಿಯಾಗಿ ಗುರುತಿಸಲ್ಪಡುತ್ತಾರೆ. 2014 ರಲ್ಲಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರದಿಯು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಕಿಮ್ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿತ್ತು.
ಅವರು ಹಲವಾರು ಉತ್ತರ ಕೊರಿಯಾದ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ್ದಾರೆ ಎಂದು ಹೇಳಲಾಗಿದೆ. 2017 ರಲ್ಲಿ ಮಲೇಷ್ಯಾದಲ್ಲಿ ಅವರ ಮಲ-ಸಹೋದರ ಕಿಮ್ ಜೊಂಗ್-ನಾಮ್ ಅವರ ಹತ್ಯೆಗೆ ಆದೇಶ ನೀಡಿದ್ದರು ಎಂದು ವ್ಯಾಪಕವಾಗಿ ನಂಬಲಾಗಿದೆ. ಅವರು ಉತ್ತರ ಕೊರಿಯಾದಲ್ಲಿ ಗ್ರಾಹಕ ಆರ್ಥಿಕತೆ, ನಿರ್ಮಾಣ ಯೋಜನೆಗಳು ಮತ್ತು ಪ್ರವಾಸಿ ಆಕರ್ಷಣೆಗಳ ವಿಸ್ತರಣೆಯತ್ತ ಕಿಮ್ ವಿಶೇಷ ಆಸಕ್ತಿ ವಹಿಸಿದ್ದಾರೆ.
ಇದನ್ನೂ ಓದಿ : ಸಿಂಗಾಪುರದ ರಫ್ತು ಕುಸಿತ: ದೇಶದಲ್ಲಿ ಆರ್ಥಿಕ ಹಿಂಜರಿತ ಆತಂಕ