ಅಲೆಕ್ಸಾಂಡ್ರಿಯಾ (ಅಮೆರಿಕ): ಸಿರಿಯಾದಲ್ಲಿದ್ದು ಮಹಿಳಾ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಗುಂಪಿನ ನೇತೃತ್ವ ವಹಿಸಿದ್ದ ಕಾನ್ಸಾಸ್ ಮೂಲದ ಮಹಿಳೆಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂಥ ಅಪರಾಧಕ್ಕೆ ವಿಧಿಸಬಹುದಾದ ಗರಿಷ್ಠ ಶಿಕ್ಷೆ ಇದಾಗಿದೆ. ಆಕೆಯ ಸ್ವಂತ ಮಕ್ಕಳೇ ನ್ಯಾಯಾಲಯದಲ್ಲಿ ತಾಯಿಯ ವಿರುದ್ಧ ಸಾಕ್ಷಿ ನುಡಿದಿದ್ದಾರೆ ಮತ್ತು ಆಕೆ ತಮ್ಮ ಮೇಲೆ ನಡೆಸಿದ ಭಯಾನಕ ಕೃತ್ಯಗಳು ಮತ್ತು ನಿಂದನೆಯನ್ನು ವಿವರಿಸಿದ್ದು ಈ ಪ್ರಕರಣದ ವಿಶೇಷವಾಗಿದೆ.
42 ವರ್ಷದ ಅಪರಾಧಿ ಮಹಿಳೆಯ ಹೆಸರು ಆಲಿಸನ್ ಫ್ಲೂಕ್-ಎಕ್ರೆನ್. ಈಕೆ ಖತೀಬಾ ನುಸೈಬಾ ಎಂಬ ಬೆಟಾಲಿಯನ್ನ ನೇತೃತ್ವ ವಹಿಸಿದ್ದನ್ನು ಮತ್ತು ಬಟಾಲಿಯನ್ನಲ್ಲಿದ್ದ ಸುಮಾರು 100 ಮಹಿಳೆಯರು ಮತ್ತು 10 ವರ್ಷ ವಯಸ್ಸಿನ ಬಾಲಕಿಯರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುವುದು ಮತ್ತು ಗ್ರೆನೇಡ್, ಆತ್ಮಹತ್ಯಾ ಬೆಲ್ಟ್‌ಗಳನ್ನು ಹೇಗೆ ಸ್ಫೋಟಿಸಬೇಕೆಂಬ ಕುರಿತು ತರಬೇತಿ ನೀಡಿರುವ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.
ಅಂಥ ಭಯೋತ್ಪಾದನಾ ತರಬೇತಿ ಪಡೆದವಳಲ್ಲಿ ತಾನೂ ಒಬ್ಬಳು ಎಂದು ಫ್ಲೂಕ್-ಎಕ್ರೆನ್ ಮಗಳು ತಿಳಿಸಿದ್ದಾಳೆ. ಈಗ ಪ್ರೌಢಾವಸ್ಥೆಗೆ ಬಂದಿರುವ ಮಗಳು ಮತ್ತು ಹಿರಿಯ ಮಗ ಇಬ್ಬರೂ ತಮ್ಮ ತಾಯಿಗೆ ಎಷ್ಟು ಸಾಧ್ಯವಿದೆಯೋ ಅಷ್ಟು ಗರಿಷ್ಠ ಪ್ರಮಾಣದ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ವಿನಂತಿಸಿದರು.
ತಮ್ಮ ತಾಯಿ ತಮ್ಮನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಿಂಸಿಸಿದ್ದಾಳೆ ಎಂದು ಮಕ್ಕಳು ಹೇಳಿದ್ದು, ನ್ಯಾಯಾಲಯಕ್ಕೆ ಬರೆದ ಪತ್ರಗಳಲ್ಲಿ ತಮ್ಮ ಮೇಲಾದ ದೌರ್ಜನ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಆದರೆ ಫ್ಲೂಕ್-ಎಕ್ರೆನ್ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾಳೆ. ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಲಾಲಸೆಯಿಂದ ತನ್ನ ತಾಯಿ ತಮ್ಮ ಕುಟುಂಬವನ್ನು ಸಿರಿಯಾಕ್ಕೆ ಕರೆದೊಯ್ದು ಭಯೋತ್ಪಾದನಾ ಗುಂಪಿಗೆ ಸೇರಿಸಿದ್ದಳು ಎಂದು ಅಪರಾಧಿಯ ಮಗಳು ಹೇಳಿದ್ದಾರೆ.
ತನ್ನ ತಾಯಿ ತಾನು ಎಸಗಿದ ದೌರ್ಜನ್ಯಗಳನ್ನು ಮರೆಮಾಚುವಲ್ಲಿ ನಿಪುಳಾಗಿದ್ದಾಳೆ. ಶಿಕ್ಷೆಯ ರೂಪದಲ್ಲಿ ಆಕೆ ತನ್ನ ಮುಖದ ಮೇಲೆಲ್ಲ ಕೀಟನಾಶಕ ಸುರಿದಿದ್ದಳು. ಇದರಿಂದ ಮುಖದ ಮೇಲೆಲ್ಲ ಗುಳ್ಳೆಗಳೆದ್ದು, ಕಣ್ಣುಗಳು ಸುಡಲು ಆರಂಭವಾಗಿದ್ದವು ಎಂದು ಸಂತ್ರಸ್ತೆ ವಿವರಿಸಿದ್ದಾಳೆ.
ಇದನ್ನೂ ಓದಿ: ನಮ್ಮ ಸರ್ಕಾರ ಇಸ್ಲಾಮಿಕ್ ಜಿಹಾದಿ ಮಾನಸಿಕತೆ ಇಲ್ಲವಾಗಿಸುವ ಪ್ರತಿಬದ್ಧತೆ ಹೊಂದಿದೆ: 15 ಲಕ್ಷ ಪರಿಹಾರ ಘೋಷಿಸಿದ ತೇಜಸ್ವಿ ಸೂರ್ಯ