ಟೊಪೆಕಾ, ಕನ್ಸಾಸ್: ಗರ್ಭಪಾತ ಕುರಿತು ಕನ್ಸಾಸ್ ನ್ಯಾಯಧೀಶರು ಹೊಸ ರಾಜ್ಯ ನಿಯಮಗಳನ್ನು ತಡೆಹಿಡಿದಿದ್ದಾರೆ. ಗರ್ಭಪಾತದ ಮಾಡಿಸಲು ಬಂದ ರೋಗಿಗಳಿಗೆ 24 ಗಂಟೆಗಳ ಕಾಲ ಕಾಯುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಈ ತೀರ್ಪಿನಿಂದ ಕನ್ಸಾಸ್‌ನಲ್ಲಿ ಗರ್ಭಪಾತ ಹಕ್ಕುಗಳ ವಕೀಲರಿಗೆ ಮತ್ತೊಂದು ದೊಡ್ಡ ಜಯ ಸಿಕ್ಕಂತಾಗಿದೆ. ಜಿಲ್ಲಾ ನ್ಯಾಯಾಧೀಶ ಕೆ.ಕ್ರಿಸ್ಟೋಫರ್ ಜಯರಾಮ್ ಅವರ ಆದೇಶವು ವರ್ಷಗಳಿಂದ ಜಾರಿಯಲ್ಲಿದ್ದ ಕೆಲವು ನಿರ್ಬಂಧಗಳನ್ನು ತೆಗೆದು ಹಾಕಿದೆ. ಗರ್ಭಪಾತಕ್ಕಾಗಿ ಕಾಯುವ ಅವಧಿಯು 1997 ರಿಂದ ಜಾರಿಯಲ್ಲಿತ್ತು.
ಈ ವಿವಾದಾತ್ಮಕ ವಿಷಯದ ಎರಡೂ ಕಡೆಯ ಆಳವಾದ ನಂಬಿಕೆಗಳಿಗೆ ನ್ಯಾಯಾಲಯವು ಗೌರವವನ್ನು ಹೊಂದಿದೆ ಎಂದು ಜಯರಾಮ್ ತಮ್ಮ 92 ಪುಟಗಳ ಆದೇಶದಲ್ಲಿ ಬರೆದಿದ್ದಾರೆ. ಗರ್ಭಪಾತ ಮಾಡಿಸುವ ಎರಡು ಚಿಕಿತ್ಸಾಲಯಗಳ ನೆಲೆಯಾದ ಕನ್ಸಾಸ್ ಸಿಟಿ ಪ್ರದೇಶದಲ್ಲಿನ ಜಾನ್ಸನ್ ಕೌಂಟಿಯ ಕೆಲವರು ಈ ಪ್ರಕರಣವನ್ನು ದಾಖಲಿಸಿದ್ದರು.
ಸುಪ್ರೀಂಕೋರ್ಟ್ 2019 ರಲ್ಲಿ ಕನ್ಸಾಸ್ ಸಂವಿಧಾನವು ದೈಹಿಕ ಸ್ವಾಯತ್ತತೆಯ ಹಕ್ಕನ್ನು ರಕ್ಷಿಸುತ್ತದೆ. ಹೀಗಾಗಿ ಗರ್ಭಪಾತವನ್ನು ಮೂಲಭೂತ ಹಕ್ಕು ಎಂದು ಘೋಷಿಸಿತ್ತು. ಅಲ್ಲಿನ ಶಾಸಕರು, ಗರ್ಭಪಾತದ ಹಕ್ಕನ್ನು ನೀಡುವುದಿಲ್ಲ ಎಂದು ಘೋಷಿಸಲು ಗರ್ಭಪಾತ ತಿದ್ದುಪಡಿ ಕಾಯ್ದೆಯನ್ನು ಪ್ರಸ್ತಾಪಿಸಿದರು. ಆದರೆ ಆಗಸ್ಟ್ 2022 ರಲ್ಲಿ ರಾಜ್ಯಾದ್ಯಂತ ನಡೆದ ಮತದಾನದಲ್ಲಿ ಗರ್ಭಪಾತದ ಹಕ್ಕುಗಳನ್ನು ಎತ್ತಿಹಿಡಿಯುವ ಮೂಲಕ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.
ಕನ್ಸಾಸ್ ರಾಜ್ಯ ಆರೋಗ್ಯ ಇಲಾಖೆಯ ಅಂಕಿ - ಅಂಶಗಳ ಪ್ರಕಾರ 2022 ರಲ್ಲಿ ಗರ್ಭಪಾತದಲ್ಲಿ ಶೇಕಡಾ 57 ರಷ್ಟು ಹೆಚ್ಚಳ ಕಂಡಿದೆ. ಗರ್ಭಪಾತಕ್ಕೆ ವಿರೋಧ ವ್ಯಕ್ತಪಡಿಸುವವರು ಆಗಸ್ಟ್ 2022 ರಲ್ಲಿ ನಡೆದ ಮತದಾನದ ಮೊದಲು ಅಸ್ತಿತ್ವದಲ್ಲಿರುವ ಎಲ್ಲಾ ಗರ್ಭಪಾತ ನಿರ್ಬಂಧಗಳು ಅಪಾಯದಲ್ಲಿರಬಹುದು ಎಂದು ಪದೇ ಪದೇ ವಾದಿಸುತ್ತಿದ್ದರು.
ಸುರಕ್ಷಿತ ಗರ್ಭಪಾತ: ಗರ್ಭಪಾತಕ್ಕೆ ಸಂಬಂಧಿಸಿದಂತೆ ಕೆಲ ದೇಶಗಳು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿವೆ. ಈ ಹಿಂದೆ ಗರ್ಭಪಾತಕ್ಕೆ ಅವಕಾಶ ನೀಡಿದ ರಾಷ್ಟ್ರಗಳಲ್ಲಿ ಇದೀಗ ಅನೇಕ ನಿಯಮಗಳು ಕೂಡಾ ಜಾರಿಗೆ ಬಂದಿವೆ ಎಂದು ಬ್ರಿಟಿಷ್ ಅಧ್ಯಯನ ತಿಳಿಸಿದೆ. ಲೈಸೆನ್ಸ್ ಹೊಂದಿರದ ಆಸ್ಪತ್ರೆಗಳಲ್ಲಿ ಅಸುರಕ್ಷಿತ ಗರ್ಭಪಾತ ಕ್ರಮದ ಮೂಲಕ ತಾಯಂದಿರ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೆ. ವರ್ಷದಲ್ಲಿ 2.5 ಕೋಟಿ ಮಹಿಳೆಯರು ಗರ್ಭಪಾತಕ್ಕೆ ಒಳಗಾಗುತ್ತಿದ್ದಾರೆ. ಶೇ 13ರಷ್ಟು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಪೋಲ್ಯಾಂಡ್ ಮತ್ತ ಇಎಲ್ ಸಲವಡೊರ್ನಲ್ಲಿ ಈ ವ್ಯವಸ್ಥೆ ಬದಲಾವಣೆಗೆ ಮುಂದಾಗಿದೆ. ಕೊಲೊಂಬಿಯಾ, ಮೆಕ್ಸಿಕೊ, ಅರ್ಜೆಟಿನಾ ಮತ್ತು ಭಾರತದಲ್ಲಿ ಸುರಕ್ಷಿತ ಗರ್ಭಪಾತಕ್ಕೆ ಅನುಗುಣವಾಗಿ ನಿಯಮ ಜಾರಿಗೆ ತರಲಾಗುತ್ತಿದೆ.
ಓದಿ: 26 ವಾರಗಳ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ನಕಾರ: ವಿವಾಹಿತ ಮಹಿಳೆಯ ಅರ್ಜಿ ವಜಾ