ದಕ್ಷಿಣ ಸುಡಾನ್ ಅಧ್ಯಕ್ಷ ಸಲ್ವಾ ಕಿರ್ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ರಾಷ್ಟ್ರಗೀತೆ ಹಾಡುತ್ತಿದ್ದಾಗಲೇ ಪ್ಯಾಂಟ್ನಲ್ಲಿ ಮೂತ್ರ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಸುಡಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಸ್ಎಸ್ಬಿಸಿ) ಈ ದೃಶ್ಯ ಸೆರೆಹಿಡಿದಿದೆ. ಆದರೆ, ಈ ದೃಶ್ಯವನ್ನು ಎಸ್ಎಸ್ಬಿಸಿ ಪ್ರಸಾರ ಮಾಡಿಲ್ಲ. ಇದರ ನಡುವೆಯೂ ಅಧ್ಯಕ್ಷರ ವಿಡಿಯೋ ಹೊರ ಬಿದ್ದಿದೆ.
79 ವರ್ಷದ ಅಧ್ಯಕ್ಷ ಸಲ್ವಾ ಕಿರ್ ಅವರು ರಸ್ತೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಸಾರ್ವಜನಿಕವಾಗಿ ರಾಷ್ಟ್ರಗೀತೆ ಹಾಡುವ ವೇಳೆಯೇ ಅವರ ಪ್ಯಾಂಟ್ ಒದ್ದೆಯಾಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದು ಕಿರ್ ಅವರ ಗಮನಕ್ಕೂ ಬಂದಿದೆ. ಅಲ್ಲದೇ, ಸುತ್ತಲಿದ್ದ ಜನರೂ ಕೂಡ ಇದನ್ನು ಗಮನಿಸುತ್ತಿರುವುದು ಈ ದೃಶ್ಯದಲ್ಲಿ ಕಾಣಬಹುದಾಗಿದೆ.
ಈ ದೃಶ್ಯವನ್ನು ಸೆರೆಹಿಡಿದಿದ್ದ ಎಸ್ಎಸ್ಬಿಸಿ ಪ್ರಸಾರ ಮಾಡದಿದ್ದರೂ, ಈ ದೃಶ್ಯ ಬಹಿರಂಗವಾಗಿದೆ. ಇದು ಸರ್ಕಾರದ ಗಮನಕ್ಕೂ ಬಂದ ಬಳಿಕ ತನಿಖೆ ನಡೆಸಲಾಗಿದೆ. ಇದರ ಭಾಗವಾಗಿಯೇ ಎಸ್ಎಸ್ಬಿಸಿಯ ಪತ್ರಕರ್ತರಾದ ಜಾಕೋಬ್ ಬೆಂಜಮಿನ್, ಮುಸ್ತಫಾ ಓಸ್ಮಾನ್, ವಿಕ್ಟರ್ ಲಾಡೋ, ಜೋವಲ್ ಟೊಂಬೆ, ಚೆರ್ಬೆಕ್ ರೂಬೆನ್ ಮತ್ತು ಜೋಸೆಫ್ ಆಲಿವರ್ರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಿಡಿಯೋ ಬಿಡುಗಡೆ ಮಾಡಿರುವುದರ ಹಿಂದೆ ಯಾರಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಇವರ ಬಂಧನವಾಗಿದೆ ಎಂದು ವರದಿಯಾಗಿದೆ. ಇದು ಅಧ್ಯಕ್ಷರ ಮತ್ತು ರಾಷ್ಟ್ರೀಯ ಭದ್ರತೆಯ ಸೂಕ್ಷ್ಮ ವಿಷಯವಾಗಿದೆ. ಇಂತಹ ವಿಡಿಯೋವನ್ನು ಪ್ರಸಾರ ಮಾಡಿದ್ದು ಅಪರಾಧ. ಈ ವಿಡಿಯೋದ ದೃಶ್ಯದ ಹಂಚಿಕೆ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಮಾಹಿತಿ, ಸಂವಹನ, ತಂತ್ರಜ್ಞಾನ ಮತ್ತು ಅಂಚೆ ಸೇವೆಗಳ ಸಚಿವಾಲಯ ಹೇಳಿದೆ.
ಪತ್ರಕರ್ತರ ಸಂಘ ಆಕ್ರೋಶ: ಪತ್ರಕರ್ತರ ಬಂಧನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ದಕ್ಷಿಣ ಸುಡಾನ್‌ನ ಪತ್ರಕರ್ತರ ಒಕ್ಕೂಟ, ತ್ವರಿತ ತನಿಖೆಗೆ ಕರೆ ನೀಡಿದೆ. ವೃತ್ತಿಪರ ದುರ್ನಡತೆ ಅಥವಾ ಅಪರಾಧ ಕಂಡುಬಂದಲ್ಲಿ ಅಧಿಕಾರಿಗಳು ನ್ಯಾಯಯುತ, ಪಾರದರ್ಶಕ ಮತ್ತು ಕಾನೂನಿಗೆ ಅನುಸಾರವಾಗಿ ಸಮಸ್ಯೆಯನ್ನು ಪರಿಹರಿಸಬೇಕು. ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಎಂದು ಕೋರಿದೆ.
ದಕ್ಷಿಣ ಸುಡಾನ್, 2011ರಲ್ಲಿ ಸುಡಾನ್‌ನಿಂದ ಬೇರ್ಪಟ್ಟು ಸ್ವತಂತ್ರವಾಯಿತು. ಅಂದಿನಿಂದ ಸಲ್ವಾ ಕೀರ್ ದೇಶದ ಏಕೈಕ ಅಧ್ಯಕ್ಷರಾಗಿದ್ದಾರೆ. ಆಫ್ರಿಕನ್ ದೇಶವಾದ ಸುಡಾನ್ನಲ್ಲಿ ಸುದೀರ್ಘವಾಗಿ ನಡೆಯುತ್ತಿದ್ದ ಅಂತರ್ಯುದ್ಧವನ್ನು 2018 ರ ಶಾಂತಿ ಒಪ್ಪಂದದ ಪ್ರಕಾರ ಕೊನೆಗೊಳಿಸಲಾಗಿದೆ. ಇದರ ಮಧ್ಯೆ ಅಧ್ಯಕ್ಷೀಯ ಚುನಾವಣೆಯನ್ನು 2024 ರವರೆಗೆ ಮುಂದೂಡಲಾಗಿದೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 2 ತಿಂಗಳಲ್ಲೇ ಮತ್ತೊಂದು ಪ್ರಬಲ ಭೂಕಂಪನ: 7.7 ತೀವ್ರತೆ ದಾಖಲು