ನವದೆಹಲಿ: ಐದು ದಿನಗಳ ಯುಕೆ ಭೇಟಿಯ ಭಾಗವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ದೀಪಾವಳಿಯಂದು ಲಂಡನ್ನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದರು. ವಿಶ್ವಾದ್ಯಂತ ಭಾರತೀಯರಿಗೆ ಶಾಂತಿ ಮತ್ತು ಸೌಹಾರ್ದತೆಗಾಗಿ ಅವರು ಪ್ರಾರ್ಥಿಸಿದರು.
"ದೀಪಾವಳಿಯಂದು ಲಂಡನ್ನ ಬಿಎಪಿಎಸ್ ಶ್ರೀ ಸ್ವಾಮಿ ನಾರಾಯಣ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು, ನನ್ನ ಸುದೈವ. ಪ್ರಪಂಚದಾದ್ಯಂತ ನಮ್ಮ ಸಮುದಾಯದ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಜೈಶಂಕರ್ ತಮ್ಮ ಪತ್ನಿಯೊಂದಿಗೆ ಎಕ್ಸ್ನಲ್ಲಿ ಬರೆದಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ಅಮೆರಿಕದಲ್ಲಿನ ಭಾರತೀಯ ಸಮುದಾಯದೊಂದಿಗೆ ಮಾತನಾಡಿದರು ಮತ್ತು ವಿಶ್ವಾದ್ಯಂತ ಭಾರತಕ್ಕೆ ಹೆಮ್ಮೆ ಮೂಡಿಸುತ್ತಿರುವ ಭಾರತೀಯರಿಗೆ ಧನ್ಯವಾದ ಅರ್ಪಿಸಿದರು. ನೀಸ್ಡೆನ್ ದೇವಾಲಯ ಎಂದೂ ಕರೆಯಲ್ಪಡುವ ಬಿಎಪಿಎಸ್ ದೇವಾಲಯವು ಭಾರತದ ಸಚಿವರು ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಭಕ್ತರನ್ನು ಭೇಟಿ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿತು.
ಏತನ್ಮಧ್ಯೆ ಬ್ರಿಟಿಷ್ ಪ್ರಧಾನಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ಆಗಮಿಸಿ ದೀಪಾವಳಿಯ ಚಹಾಕೂಟದಲ್ಲಿ ಭಾಗಿಯಾಗಬೇಕು ಎಂದು ಸಚಿವರಿಗೆ ಆಹ್ವಾನ ನೀಡಿದ್ದಾರೆ. ನವೆಂಬರ್ 11 ರಂದು ಪ್ರಾರಂಭವಾದ ತಮ್ಮ ಭೇಟಿಯ ಸಮಯದಲ್ಲಿ, ಜೈಶಂಕರ್ ಇಂಗ್ಲೆಂಡ್ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಮತ್ತು ಇತರ ಹಲವಾರು ಗಣ್ಯರನ್ನು ಭೇಟಿ ಮಾಡಲಿದ್ದಾರೆ.
ಅವರು ಸೋಮವಾರ ಲಂಡನ್ನಲ್ಲಿ ಭಾರತೀಯ ಹೈಕಮಿಷನ್ ಆಯೋಜಿಸಿರುವ ದೀಪಾವಳಿ ಸಮಾರಂಭದ ಸ್ವಾಗತ ಸಮಾರಂಭ ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ ಮತ್ತು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂದಾಜು ಜಿಬಿಪಿ 36 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆ ಮಾಡಿಕೊಳ್ಳಲು ಭಾರತ ಮತ್ತು ಯುಕೆ ಕಳೆದ ವರ್ಷ ಜನವರಿಯಿಂದ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ದ ಬಗ್ಗೆ ಮಾತುಕತೆ ನಡೆಸುತ್ತಿರುವುದರಿಂದ ಈ ಭೇಟಿ ಮಹತ್ವದ್ದಾಗಿದೆ.
"ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿಯು ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧಗಳಿಗೆ ಹೊಸ ಉತ್ತೇಜನ ನೀಡಲಿದೆ. ಭಾರತ ಮತ್ತು ಯುಕೆ ಆತ್ಮೀಯ ಸಂಬಂಧವನ್ನು ಹಂಚಿಕೊಂಡಿವೆ. ಭಾರತ - ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು 2021 ರಲ್ಲಿ ಭಾರತ - ಯುಕೆ ಮಾರ್ಗಸೂಚಿ 2030 ರೊಂದಿಗೆ ಪ್ರಾರಂಭಿಸಲಾಯಿತು." ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೈಶಂಕರ್ ಅವರ ಯುಕೆ ಭೇಟಿ ನವೆಂಬರ್ 15 ರಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ : ವಿಂಡೋಸ್ 10 ಬಳಕೆದಾರರಿಗೂ ಸಿಗಲಿದೆ AI ಪರ್ಸನಲ್ ಅಸಿಸ್ಟೆಂಟ್ 'ಕೋಪೈಲಟ್'