ಡಮಾಸ್ಕಸ್(ಸಿರಿಯಾ): ಪ್ರಬಲ ಭೂಕಂಪಕ್ಕೆ ತುತ್ತಾಗಿ ಸಾವಿರಾರು ಜನರನ್ನು ಕಳೆದುಕೊಂಡು ನಲುಗಿರುವ ಸಿರಿಯಾದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿ ಗಾಯದ ಮೇಲೆ ಬರೆ ಎಳೆದಿದೆ. ವೈಮಾನಿಕ ದಾಳಿಯಲ್ಲಿ ನಾಗರಿಕರು, ಅಧಿಕಾರಿಗಳು ಸೇರಿ 15 ಜನರು ಮೃತಪಟ್ಟಿದ್ದಾರೆ. ವಸತಿ ಪ್ರದೇಶ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಎರಡು ವಾರಗಳ ಅಂತರದಲ್ಲಿ ನಡೆಸಿದ 2ನೇ ದಾಳಿ ಇದಾಗಿದೆ.
ಬಿಗಿ ಭದ್ರತೆ ಇರುವ ಪ್ರದೇಶದ ಮೇಲೆಯೇ ಇಸ್ರೇಲ್ ದಾಳಿ ನಡೆಸಿದೆ. ಇದರಿಂದ ವಸತಿ ಸಮುಚ್ಛಯ ಧರೆಗೆ ಉರುಳಿ ಬಿದ್ದಿದೆ. ಡಮಾಸ್ಕಸ್ನ ಸುತ್ತಲೂ ಇರಾನ್ ದಾಳಿ ನಡೆಸುತ್ತಲೇ ಇರುತ್ತದೆ. ಆದರೆ, ಇದೇ ಸಲ ವಸತಿ ಪ್ರದೇಶದ ಮೇಲೆ ವಾಯುದಾಳಿ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ ಹಕ್ಕುಗಳ ಕೇಂದ್ರದ ಪಕ್ಕದಲ್ಲೇ ಈ ದಾಳಿ ನಡೆಸಲಾಗಿದೆ. ಇದರಿಂದ ನಾಗರಿಕರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ. ಹಿರಿಯ ಭದ್ರತಾ ಅಧಿಕಾರಿಗಳು, ಭದ್ರತಾ ಶಾಖೆಗಳು ಮತ್ತು ಗುಪ್ತಚರ ಪ್ರಧಾನ ಕಚೇರಿಗಳು ಇರುವ ಹೆಚ್ಚಿನ ಭದ್ರತಾ ಪ್ರದೇಶವಾದ ಕಾಫ್ರ್ ಸೌಸಾದಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಉದ್ದೇಶಿತ ದಾಳಿಯು ಜನನಿಬಿಡ ಪ್ರದೇಶದ ಹಲವಾರು ಕಟ್ಟಡಗಳನ್ನು ಹಾನಿಗೊಳಿಸಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:30 ರ ಸುಮಾರಿಗೆ ದೊಡ್ಡ ಸ್ಫೋಟಗಳು ಕೇಳಿಬಂದವು. ಇಸ್ರೇಲಿ ಪಡೆಗಳು ಆಕ್ರಮಿಸಿಕೊಂಡ ಗೋಲನ್ ಹೈಟ್ಸ್‌ನ ಕಡೆಯಿಂದ ಡಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದವು. ದಾಳಿಯಲ್ಲಿ 10 ಅಂತಸ್ತಿನ ಕಟ್ಟಡ ತೀವ್ರ ಹಾನಿಗೊಳಗಾಗಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ನಿನ್ನೆಯಷ್ಟೇ ಶಂಕಿತ ಐಎಸ್ ದಾಳಿಯಲ್ಲಿ ಹೋಮ್ಸ್ ಪ್ಯಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 53 ಜನರು ಸಾವನ್ನಪ್ಪಿದ್ದರು. ಇದಾದ ಒಂದು ದಿನದ ಬಳಿಕ ಮತ್ತೊಂದು ದಾಳಿ ನಡೆದಿದ್ದು, 15 ಜನರನ್ನ ಬಲಿಪಡೆಯಲಾಗಿದೆ.
ಎರಡು ಭಾಗವಾದ ಟರ್ಕಿ ಹಳ್ಳಿ: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಅಲ್ಲಿನ ಒಂದು ಹಳ್ಳಿಯನ್ನು ಎರಡು ಭಾಗವನ್ನಾಗಿ ಮಾಡಿದೆ. ಅಲ್ಲದೇ 13 ಮೀಟರ್ ಆಳಕ್ಕೆ ಕುಸಿದಿರುವುದು ಭೀಕರತೆಗೆ ಸಾಕ್ಷಿಯಾಗಿದೆ.
ದಕ್ಷಿಣ ಟರ್ಕಿಯ ಡೆಮಿರ್ಕೊರ್ಪು ಎಂಬ ಗ್ರಾಮದಲ್ಲಿ ಪ್ರಕೃತಿ ವಿಕೋಪ ವಿನಾಶವೇ ಸೃಷ್ಟಿಸಿದೆ. ಇಲ್ಲಿನ ಮನೆಗಳು ಸಾಲಾಗಿ ಉದುರಿಬಿದ್ದು ಗುಜರಿಪ್ರದೇಶದಂತೆ ಭಾಸವಾಗುತ್ತಿದೆ. ಕಂಪನದೇಟಿಗೆ ಹಳ್ಳಿ ಎರಡು ಭಾಗವಾಗಿದೆ. ಅಲ್ಲದೇ ತಗ್ಗು ಮತ್ತು ಎತ್ತರಪ್ರದೇಶ ಸೃಷ್ಟಿಯಾಗಿದ್ದು, 3 ಮೀಟರ್ ಆಳಕ್ಕೆ ಸರಿದಿದೆ. ಒಂದು ಅಂತಸ್ತಿನ ಮನೆಯಷ್ಟು ಒಳಗೆ ಇಡೀ ಪ್ರದೇಶ ಕುಸಿದಿದೆ. ಇದರಿಂದ ಹಳ್ಳಿಯ ಅರ್ಧಭಾಗ ಕೆರೆಯಂತಾಗಿದೆ. ಅವಶೇಷಗಳಾಗಿ ಬಿದ್ದಿರುವ ಮನೆಗಳ ಒಳಗೆ ನೀರು ನುಗ್ಗಿದೆ.
ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪ ಮತ್ತು ಅದರ ನಂತರದ ಲಘು ಕಂಪನಗಳು ಟರ್ಕಿಯನ್ನು ಧ್ವಂಸಗೊಳಿಸಿವೆ. ಇಲ್ಲಿಯವರೆಗೂ 46,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಇದನ್ನೂ ಓದಿ: 296 ಗಂಟೆ ಅವಶೇಷಗಳಡಿ ಉಸಿರಾಡುತ್ತಿದ್ದ ದಂಪತಿ ಕೊನೆಗೂ ರಕ್ಷಣೆ, ಪ್ರಾಣ ಬಿಟ್ಟ ಮಗು!