ಖಾನ್ ಯೂನಿಸ್ (ಗಾಜಾ ಪಟ್ಟಿ): ಗಾಜಾ ನಗರದಲ್ಲಿ ಹಮಾಸ್ ವಿರುದ್ಧ ಭೂಸೇನೆ ಪ್ರಬಲವಾಗಿ ಹೋರಾಡುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಹೇಳಿಕೆಯು ಇಸ್ರೇಲ್ ಪಡೆಯ ಹೊಸ ಹಂತವನ್ನು ಸೂಚಿಸುತ್ತದೆ. ಹಮಾಸ್ ಉಗ್ರಗಾಮಿ ಗುಂಪಿನ ಪ್ರಧಾನ ಕಚೇರಿ ಮತ್ತು ಭದ್ರಕೋಟೆಯತ್ತ ಇಸ್ರೇಲ್ ಸಾಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಮಿಲಿಟರಿ ವಕ್ತಾರ, ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಇಸ್ರೇಲ್ ಭೂ ಪಡೆಗಳು ಗಾಜಾ ನಗರದ ಆಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಮಾಸ್ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿವೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ತನ್ನ ಯುದ್ಧದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಹಮಾಸ್‌ನ ಸಾವಿರಾರು ಜನರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದರು.
ಮತ್ತೊಂದೆಡೆ, ಗಾಜಾ ಯುದ್ಧದ ವಲಯದಿಂದ ಪ್ಯಾಲೇಸ್ಟೈನಿಯನ್ ನಾಗರಿಕರು ವಲಸೆ ಹೋಗುತ್ತಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ನಾಗರಿಕರು ಪ್ರಯತ್ನಿಸುತ್ತಿದ್ದಾರೆ. ಒಂದು ಕಾಲದಲ್ಲಿ ಗಾಜಾದ ಅತ್ಯಂತ ಜನನಿಬಿಡವಾದ ಮಾರ್ಗವು ಈಗ ಜನರು ಕಾಲ್ನಡಿಗೆ ಅಥವಾ ಕತ್ತೆ ಬಂಡಿಗಳ ಮೇಲೆ ಪಲಾಯನ ಮಾಡುವ ಭಯಾನಕ ಮಾರ್ಗವಾಗಿ ಮಾರ್ಪಟ್ಟಿದೆ.
ದಕ್ಷಿಣಕ್ಕೆ ಹೋಗುವ ದಾರಿಯಲ್ಲಿ ತಮ್ಮ ಕೈಗಳನ್ನು ಮೇಲಕ್ಕೆತ್ತಿ ಬಿಳಿ ಧ್ವಜಗಳನ್ನು ಬೀಸುತ್ತಾ ಇಸ್ರೇಲ್ ಟ್ಯಾಂಕರ್ಗಳನ್ನು ನಾಲ್ಕು ಪಥದ ಹೆದ್ದಾರಿಯಲ್ಲಿ ಚಲಿಸುವಂತೆ ಕೋರುತ್ತಿದ್ದಾರೆ. ಅಲ್ಲದೇ, ಇಸ್ರೇಲಿ ಸೈನಿಕರು ತಮ್ಮ ಮೇಲೆ ಗುಂಡು ಹಾರಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾದ ಮೃತದೇಹಗಳ ಮೂಲಕ ಹಾದುಹೋಗುವಂತಾಗಿದೆ ಎಂದು ಕೆಲವರು ಹೇಳಿದ್ದಾರೆ. ಅನೇಕರು ತಮ್ಮ ಉಟ್ಟ ಬಟ್ಟೆಯಲ್ಲೇ ಓಡಿ ಬಂದು ತಪ್ಪಿಸಿಕೊಳ್ಳುತ್ತಿದ್ದಾರೆ.
ಮಹಿಳೆಯರು ಕಪ್ಪು ಮುಸುಕು ಮತ್ತು ನಿಲುವಂಗಿಯಲ್ಲಿ ತಲೆಯಿಂದ ಮುಡಿವರೆಗೆ ಮುಚ್ಚಿಕೊಂಡು ಪುಟ್ಟ ಮಕ್ಕಳನ್ನು ತೊಟ್ಟಿನಲ್ಲಿ ಹೊತ್ತುಕೊಂಡು ಸಾಗುತ್ತಿದ್ದರೆ, ಪುರುಷರು ತಮ್ಮ ಕುಟುಂಬಗಳನ್ನು ಕತ್ತೆಗಳ ಗಾಡಿಯಲ್ಲಿ ಕರೆದೊಯ್ಯುವಂತಾಗಿದೆ. ಗಾಜಾ ಪಟ್ಟಿಯ ಉತ್ತರದಲ್ಲಿ ವಾಯುದಾಳಿಗಳ ಬೆಂಬಲದೊಂದಿಗೆ ಇಸ್ರೇಲ್ ಭೂ ಪಡೆಗಳು ವಾರಾಂತ್ಯದಿಂದ ಹಮಾಸ್‌ನ ಶಕ್ತಿಯ ನೆಲೆಯಾದ ಗಾಜಾ ನಗರವನ್ನು ಸುತ್ತುವರೆದಿವೆ. ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ಇಸ್ರೇಲ್ ಪಡೆಗಳು ವಿಂಗಡಿಸಿವೆ. ಇದರಿಂದ ಉತ್ತರ ಗಾಜಾದಿಂದ ಪ್ಯಾಲೇಸ್ಟೈನಿಯನ್ ನಾಗರಿಕರು ವಲಸೆ ಹೋಗಲು ಆರಂಭಿಸಿದ್ದಾರೆ.
ಹಮಾಸ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಏಕಾಏಕಿ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆಯು ಹಮಾಸ್ ಮೇಲೆ ಯುದ್ಧ ಸಾರಿದೆ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ಸುಮಾರು 10 ಸಾವಿರ ಸಾವುಗಳು ಸಂಭವಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗಾಜಾ ಮರುವಶ ಬೇಡ: ಇಸ್ರೇಲ್ಗೆ ಅಮೆರಿಕ ಎಚ್ಚರಿಕೆ