ಜೆರುಸಲೇಂ : ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಲ್ಲಿ ಇಸ್ರೇಲಿ ಪಡೆಗಳು ಒತ್ತೆಯಾಳುಗಳು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಶೋಧವನ್ನು ಮುಂದುವರಿಸಿದ್ದು, ಈ ಪ್ರದೇಶದ ಇತರ ಆಸ್ಪತ್ರೆಗಳಿಗೂ ಶೋಧ ಕಾರ್ಯಾಚರಣೆಯನ್ನು ವಿಸ್ತರಿಸಿವೆ. ಗುರುವಾರ ಶೋಧದ ಸಮಯದಲ್ಲಿ, ಆಸ್ಪತ್ರೆಯ ಕೆಳಗೆ ಭೂಗತ ಸುರಂಗ ಶಾಫ್ಟ್ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಗುರುವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವೈದ್ಯಕೀಯ ಕೇಂದ್ರದ ಕೆಳಗೆ ಅನೇಕ ಮದ್ದುಗುಂಡುಗಳನ್ನು ಹೊಂದಿರುವ ವಾಹನವೂ ಪತ್ತೆಯಾಗಿದೆ. ರಾನ್ಟಿಸಿ ಆಸ್ಪತ್ರೆಯ ಕೆಳಗೆ ಸುರಂಗಗಳ ಸಂಕೀರ್ಣ ಜಾಲ ಕಂಡುಬಂದಿದೆ. ಅಲ್-ಖುದ್ಸ್ ಆಸ್ಪತ್ರೆಯಲ್ಲಿ ಸಹ ಅನೇಕ ಶಸ್ತ್ರಾಸ್ತ್ರಗಳು ಕಂಡುಬಂದಿವೆ. ಇದು ಯುದ್ಧರಂಗವಾಗಿದ್ದು ಇಲ್ಲಿ ನಮ್ಮ ಪಡೆಗಳು ಇನ್ನೂ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿವೆ ಎಂದು ಹಗರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹ್ಯಾಂಡ್ ಗ್ರೆನೇಡ್ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್ಗಳನ್ನು (ಆರ್ಪಿಜಿ) ತೋರಿಸುವ ಫೋಟೋಗಳನ್ನು ಪ್ರಸ್ತುತಪಡಿಸಿದರು.
ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಇಸ್ರೇಲಿ ಮಹಿಳೆ ಯೆಹುದಿತ್ ವೈಸ್ ಅವರ ಅವಶೇಷಗಳನ್ನು ಐಡಿಎಫ್ ಪಡೆಗಳು ಅಲ್-ಶಿಫಾ ಆಸ್ಪತ್ರೆಯ ಪಕ್ಕದ ಕಟ್ಟಡದಿಂದ ಹೊರತೆಗೆದಿವೆ ಎಂದು ಸೇನೆ ಈ ಹಿಂದೆ ಘೋಷಿಸಿತ್ತು. ಶವವನ್ನು ಇಸ್ರೇಲಿ ಭೂಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಅಲ್-ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿ.
ಆಸ್ಪತ್ರೆಯನ್ನು ಸುತ್ತುವರಿದ ಸ್ನೈಪರ್ಗಳು ವೈದ್ಯಕೀಯ ಸಿಬ್ಬಂದಿಯನ್ನು ಕಟ್ಟಡಗಳ ನಡುವೆ ಚಲಿಸದಂತೆ ತಡೆದಿದ್ದಾರೆ ಎಂದು ಅಲ್-ಶಿಫಾದ ನಿರ್ದೇಶಕ ಮುಹಮ್ಮದ್ ಅಬು ಸಲಾಮಿಯಾ ಅಲ್ ಜಜೀರಾ ಟಿವಿಗೆ ತಿಳಿಸಿದ್ದಾರೆ. 650 ಕ್ಕೂ ಹೆಚ್ಚು ಒಳರೋಗಿಗಳು, 500 ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ಆಸ್ಪತ್ರೆಯಲ್ಲಿ 5,000 ಸ್ಥಳಾಂತರಗೊಂಡ ಜನ ಆಶ್ರಯ ಪಡೆದಿದ್ದಾರೆ. ವೈದ್ಯಕೀಯ ಸೇವೆಗಳಿಗೆ ಹಾನಿಯಾದ ಕಾರಣ ತುರ್ತಾಗಿ ಡಯಾಲಿಸಿಸ್ ಅಗತ್ಯವಿರುವ ಕನಿಷ್ಠ ನಾಲ್ಕು ರೋಗಿಗಳು ಗಂಭೀರ ಸ್ಥಿತಿಯಲ್ಲಿ ಪರದಾಡುತ್ತಿದ್ದರು. ಇಸ್ರೇಲ್ ವಿದ್ಯುತ್, ನೀರು, ಆಹಾರ ಮತ್ತು ಇಂಧನ ಪೂರೈಕೆಗಳನ್ನು ಕಡಿತಗೊಳಿಸಿರುವುದು ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಹಮಾಸ್ ನಿಯಂತ್ರಿತ ಎನ್ಕ್ಲೇವ್ನಲ್ಲಿ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ಹಮಾಸ್ಗೆ ಟೆಲಿಕಾಂ ಸೇವೆ ನೀಡುವ ಪಾಲ್ಟೆಲ್ ಕಂಪನಿ ಎಕ್ಸ್ನಲ್ಲಿ ತಿಳಿಸಿದೆ. ಇಂಧನ ಮೂಲಗಳು ಸಂಪೂರ್ಣವಾಗಿ ಖಾಲಿಯಾಗಿದ್ದರಿಂದ ಸಂಪರ್ಕ ವ್ಯವಸ್ಥೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅದು ಹೇಳಿದೆ.
ಜೆರುಸಲೇಂ ಮತ್ತು ವೆಸ್ಟ್ ಬ್ಯಾಂಕ್ ನಡುವಿನ ಚೆಕ್ಪಾಯಿಂಟ್ನಲ್ಲಿ ಇಂದು ಬೆಳಗ್ಗೆ ಭೀಕರ ಗುಂಡಿನ ದಾಳಿ ನಡೆದಿದ್ದು, ಹಮಾಸ್ನ ಸಶಸ್ತ್ರ ವಿಭಾಗ ಅಲ್-ಖಸ್ಸಾಮ್ ಬ್ರಿಗೇಡ್ ಇದರ ಜವಾಬ್ದಾರಿ ವಹಿಸಿಕೊಂಡಿದೆ. ಮೂವರು ಬಂದೂಕುಧಾರಿಗಳು ಇಸ್ರೇಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಸಶಸ್ತ್ರ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಉಗ್ರರ ವಾಹನದಲ್ಲಿ ಎರಡು ಸ್ವಯಂಚಾಲಿತ ರೈಫಲ್ಗಳು, ಎರಡು ಬಂದೂಕುಗಳು, ನೂರಾರು ಸುತ್ತು ಮದ್ದುಗುಂಡುಗಳು, 10 ಮ್ಯಾಗಜೀನ್ಗಳು ಮತ್ತು ಎರಡು ಕೊಡಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇಸ್ರೇಲ್ ಸೇನೆಯು ಟ್ಯಾಂಕ್ಗಳು ಮತ್ತು ಮಿಲಿಟರಿ ವಾಹನಗಳನ್ನು ಬಳಸಿಕೊಂಡು ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಮುತ್ತಿಗೆ ಹಾಕಿದ್ದು, ಆಂಬ್ಯುಲೆನ್ಸ್ ತಂಡಗಳು ಗಾಯಾಳುಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ಯಾಲೆಸ್ಟೈನ್ ರೆಡ್ ಕ್ರೆಸೆಂಟ್ ಸೊಸೈಟಿ (ಪಿಆರ್ಸಿಎಸ್) ಹೇಳಿದೆ. ರೆಡ್ ಕ್ರೆಸೆಂಟ್ ಪ್ರಕಾರ, ಗಾಜಾ ನಗರ ಮತ್ತು ಅದರ ಉತ್ತರದ ಭಾಗದಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿರುವ ಏಕೈಕ ಆಸ್ಪತ್ರೆ ಇದಾಗಿದೆ.
ಶುಕ್ರವಾರ ಬೆಳಗ್ಗೆ ವೇಳೆಗೆ ಗಾಜಾದಲ್ಲಿ ಸಾವಿನ ಸಂಖ್ಯೆ 11,078 ಕ್ಕೇರಿದ್ದು, ಅವರಲ್ಲಿ 4,506 ಮಕ್ಕಳು ಮತ್ತು 3,027 ಮಹಿಳೆಯರು ಸೇರಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ನಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಪಶ್ಚಿಮ ದಂಡೆಯಲ್ಲಿ ಸಾವಿನ ಸಂಖ್ಯೆ 198 ಕ್ಕೆ ಏರಿದೆ.
ಇದನ್ನೂ ಓದಿ : ಇಸ್ರೇಲ್ನ ಮತ್ತೊಬ್ಬ ಯೋಧ ಸಾವು: 51ಕ್ಕೆ ಏರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ