ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಒಂದೆಡೆ ಈ ಸಂಘರ್ಷ ತಡೆಯಲು ಪ್ಯಾಲೆಸ್ಟೀನ್ ಜಾಗತಿಕ ಬೆಂಬಲ ಕೇಳುತ್ತಿದ್ದರೆ, ಇನ್ನೊಂದೆಡೆ ಇಸ್ರೇಲ್ನ ಪ್ರತೀಕಾರದ ಕ್ರಮಗಳು ತೀವ್ರಗೊಳ್ಳುತ್ತಿವೆ. ಹಮಾಸ್ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಇಸ್ರೇಲ್ ಪಣ ತೊಟ್ಟಿದೆ. ಈ ಮಧ್ಯೆ, ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ (ಯುಎಸ್‌ಎಐಡಿ) ಉದ್ಯೋಗಿಯೊಬ್ಬರು (ಅಮೆರಿಕದ ಮಾನವೀಯ ಗುಂಪಿನ ಸದಸ್ಯ) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಹೋದ್ಯೋಗಿ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ, ಯುದ್ಧದ ಸಮಯದಲ್ಲಿ ಮಾನವೀಯ ಕಾರ್ಮಿಕರ ಸುರಕ್ಷತೆಗಾಗಿ ಯುಎಸ್‌ಎಐಡಿ ಒತ್ತಾಯಿಸುತ್ತಿದೆ.
ನವೆಂಬರ್ 5ರಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಘಟನೆ ನಡೆದಿದೆ ಎಂದು ಯುಎಸ್ ಮಾನವೀಯ ಗುಂಪು ಗ್ಲೋಬಲ್ ಕಮ್ಯುನಿಟೀಸ್ ಹೇಳಿದೆ. 33 ವರ್ಷದ ಹನಿ ಜೆನಾ, ಪತ್ನಿ, ಎರಡು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಮತ್ತು ಇತರೆ ಕುಟುಂಬ ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ.
ಇಂಟರ್‌ನೆಟ್-ಟೆಕ್ನಾಲಜಿ ಉದ್ಯೋಗಿಯಾಗಿರುವ ಜೆನಾ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಗಾಜಾ ನಗರದ ಮನೆಯೊಂದರಲ್ಲಿ ತನ್ನ ಕುಟುಂಬಸ್ಥರೊಂದಿಗೆ ಆಶ್ರಯ ಪಡೆದಿದ್ದರು. ಆದರೆ, ಜೆನಾ ಮತ್ತವರ ಕುಟುಂಬ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಗೊತ್ತಾಗಿದೆ.
ವರದಿಗಳ ಪ್ರಕಾರ, ಜೆನಾ ತನ್ನ ಸಹೋದ್ಯೋಗಿಗೆ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶದಲ್ಲಿ 'ನನ್ನ ಹೆಣ್ಣುಮಕ್ಕಳು ಭಯಭೀತರಾಗಿದ್ದಾರೆ, ನಾನು ಅವರನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಈ ಬಾಂಬ್ ದಾಳಿಗಳು ಭಯಾನಕವಾಗಿವೆ' ಎಂದು ಬರೆದಿದ್ದಾರೆ.
ಅಮಾಯಕ ನಾಗರಿಕರ ಸಾವಿನಿಂದ ದುಃಖ: USAID ವಕ್ತಾರ ಜೆಸ್ಸಿಕಾ ಜೆನ್ನಿಂಗ್ಸ್ ಪ್ರತಿಕ್ರಿಯಿಸಿ, ಈ ಹೋರಾಟದಲ್ಲಿ ಹನಿ ಜೆನಾ ಅವರಂತಹ ಧೈರ್ಯಶಾಲಿ ವ್ಯಕ್ತಿಗಳು ಸೇರಿದಂತೆ ಅಮಾಯಕ ನಾಗರಿಕರು ಮತ್ತು ಮಾನವೀಯ ನೆರವು ನೀಡುವ ಕಾರ್ಯಕರ್ತರನ್ನು ನಾವು ಕಳೆದುಕೊಂಡಿರುವುದಕ್ಕೆ ಯುಎಸ್‌ಎಐಡಿ ಸಮುದಾಯವು ತೀವ್ರ ದುಃಖಿತವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್ - ಹಮಾಸ್ ಯುದ್ದದ ಎಫೆಕ್ಟ್ : ಗೋಕರ್ಣಕ್ಕೆ ಬರುವ ಇಸ್ರೇಲ್ ಪ್ರವಾಸಿಗರ ಸಂಖ್ಯೆ ಇಳಿಮುಖ
ಇಸ್ರೇಲ್-ಹಮಾಸ್ ಸಂಘರ್ಷ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅಕ್ಟೋಬರ್ 7ರಿಂದ ಪ್ರಾರಂಭವಾದ ಈ ಸಂಘರ್ಷದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಗಾಜಾ ಪಟ್ಟಿಯಲ್ಲಿ 6,000 ಮತ್ತು ಇಸ್ರೇಲ್‌ನಲ್ಲಿ 1,500 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತಪ್ಪಾಗಿ ಭಾವಿಸಿ ಹಮಾಸ್ ವಶದಲ್ಲಿದ್ದ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಕೊಂದಾಕಿದ ಇಸ್ರೇಲ್ ಸೇನೆ