ಟೆಲ್ ಅವೀವ್ (ಇಸ್ರೇಲ್) : ಗಾಜಾ ಪಟ್ಟಿಯ ಅಲ್-ಶಿಫಾ ಆಸ್ಪತ್ರೆಯಲ್ಲಿ ಸಿಲುಕಿರುವ ಶಿಶುಗಳನ್ನು ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ. ಅಲ್-ಶಿಫಾ ಆಸ್ಪತ್ರೆಯೊಂದಿಗೆ ತಾನು ಸಂಪೂರ್ಣ ಸಂಪರ್ಕ ಕಳೆದುಕೊಂಡಿರುವುದಾಗಿ ಮತ್ತು ಇಸ್ರೇಲ್ ದಾಳಿಯಿಂದಾಗಿ ಮಕ್ಕಳು ಮತ್ತು ವೃದ್ಧರು ಆಸ್ಪತ್ರೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ಮುನ್ನ ತಿಳಿಸಿತ್ತು.
ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಸಿಲುಕಿರುವ ಮಕ್ಕಳನ್ನು ಸ್ಥಳಾಂತರಿಸಲು ಇದೇ ಭಾನುವಾರ ಮಿಲಿಟರಿ ಅನುಕೂಲ ಮಾಡಿಕೊಡಲಿದೆ ಎಂದು ಇಸ್ರೇಲ್ ಮುಖ್ಯ ಮಿಲಿಟರಿ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. "ಆಸ್ಪತ್ರೆಯಲ್ಲಿನ ಮಕ್ಕಳನ್ನು ಬೇರೊಂದು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಬೇಕೆಂದು ಶಿಫಾ ಆಸ್ಪತ್ರೆಯ ಸಿಬ್ಬಂದಿ ವಿನಂತಿ ಮಾಡಿದ್ದಾರೆ ಹಾಗೂ ನಾವು ಅವರಿಗೆ ಅಗತ್ಯವಿರುವ ಸಹಾಯ ಒದಗಿಸಲಿದ್ದೇವೆ" ಎಂದು ಹಗರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗಾಜಾ ಆರೋಗ್ಯ ಸಚಿವಾಲಯದ ವಕ್ತಾರರ ಪ್ರಕಾರ, ಇಂಧನ ಪೂರೈಕೆ ನಿಂತು ಹೋಗಿದ್ದರಿಂದ ಅಲ್ ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಕಾರ್ಯಾಚರಣೆಗಳು ಶನಿವಾರ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಇನ್ಕ್ಯುಬೇಟರ್ ಒಳಗಿದ್ದ ಒಂದು ನವಜಾತ ಶಿಶು ಸಾವನ್ನಪ್ಪಿದೆ. ಆಸ್ಪತ್ರೆಯಲ್ಲಿ ಇನ್ನೂ 45 ಶಿಶುಗಳಿವೆ ಎಂದು ಹಮಾಸ್ ನಿಯಂತ್ರಿತ ಗಾಜಾದ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಖಿದ್ರಾ ತಿಳಿಸಿದರು.
ಅಲ್-ಶಿಫಾ ಆಸ್ಪತ್ರೆಯ ಆವರಣದ ಬಳಿ ಹೋರಾಟ ಹೆಚ್ಚಾದ ನಂತರ ಆಸ್ಪತ್ರೆಯಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದವರು ಬಹುಶಃ ದಕ್ಷಿಣ ಗಾಜಾಗೆ ಹೊರಟು ಹೋಗಿದ್ದಾರೆ ಎಂದು ಡಬ್ಲ್ಯುಎಚ್ಒ ಹೇಳಿದೆ. ಇಸ್ರೇಲ್ ಸೇನೆಯು ಆಸ್ಪತ್ರೆಯ ಮೇಲೆ ಶೆಲ್ ದಾಳಿ ನಡೆಸುತ್ತಿದೆ ಮತ್ತು ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜನ ನಿರಂತರವಾಗಿ ಸಾಯುತ್ತಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾ ಆರೋಗ್ಯ ಸಚಿವಾಲಯ ಈ ಹಿಂದೆ ಹೇಳಿತ್ತು.
ಏತನ್ಮಧ್ಯೆ, ಅಲ್-ಶಿಫಾ ಆಸ್ಪತ್ರೆ ಹಮಾಸ್ನ ಪ್ರಮುಖ ಕಮಾಂಡ್ ಸೆಂಟರ್ ಆಗಿದ್ದು, ಆಸ್ಪತ್ರೆಯ ಕೆಳಗೆ ಭೂಗತ ಸುರಂಗ ಜಾಲಗಳನ್ನು ಅದು ನಿರ್ಮಿಸಿದೆ ಎಂದು ಐಡಿಎಫ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಹಮಾಸ್ ಮಕ್ಕಳು ಮತ್ತು ವೃದ್ಧರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಐಡಿಎಫ್ ಆರೋಪಿಸಿದೆ. ಉತ್ತರ ಗಾಜಾದಿಂದ ದಕ್ಷಿಣ ಭಾಗಕ್ಕೆ ಜನರನ್ನು ಸ್ಥಳಾಂತರಿಸಲು ಇಸ್ರೇಲ್ ಮಿಲಿಟರಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅವಕಾಶ ನೀಡುತ್ತಿದೆ.
ಇದನ್ನೂ ಓದಿ: ಹಮಾಸ್ ದಾಳಿಯ ಬಗ್ಗೆ 4 ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಮೊದಲೇ ಅರಿವಿತ್ತು; ಇಸ್ರೇಲ್ ಆರೋಪ