ಬೀಟ್ ಹನೂನ್ (ಗಾಜಾ ಪಟ್ಟಿ): ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯ ನಂತರ ಇಸ್ರೇಲ್ ವೈಮಾನಿಕ ದಾಳಿಗೂ ಮೊದಲು ಮತ್ತು ನಂತರ ತೆಗೆದ ಉಪಗ್ರಹದ ಚಿತ್ರಗಳಲ್ಲಿ ಉತ್ತರ ಗಾಜಾದ ಪ್ರದೇಶಗಳ ನಾಶದ ಬಾಹ್ಯಾಕಾಶದ ನೋಟಗಳು ಸೆರೆಯಾಗಿವೆ. ಇದರಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳು ಕುಸಿದು ಭೂಪ್ರದೇಶವು ಮೂನ್‌ಸ್ಕೇಪ್ ನಂತಾಗಿರುವ ದೃಶ್ಯಗಳು ಕಂಡು ಬಂದಿವೆ.
ಮ್ಯಾಕ್ಸರ್ ಟೆಕ್ನಾಲಜೀಸ್ ಶನಿವಾರ ತೆಗೆದ ಚಿತ್ರಗಳಲ್ಲಿ, ಇಜ್ಬಾತ್ ಬೀಟ್ ಹನೂನ್ ನೆರೆಹೊರೆಯಲ್ಲಿನ ನಾಲ್ಕು ಮತ್ತು ಐದು ಅಂತಸ್ತಿನ ಕಟ್ಟಡಗಳು ಕುಸಿತದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕೆಲವು ಬೃಹತ್ ಕಟ್ಟಡಗಳು ಧರೆಗುರುಳಿವೆ. ಹಲವು ಕಟ್ಟಡಗಳು ಅರ್ಧದಷ್ಟು ಹಾನಿಯಾಗಿವೆ ಮತ್ತು ಎರಡು ಬೃಹತ್ ಕಟ್ಟಡ ಸಂಕೀರ್ಣಗಳು ಕಲ್ಲು, ಮಣ್ಣಿನ ರಾಶಿಯಂತೆ ಬಿದ್ದಿವೆ. ಅಲ್ ಕರಾಮೆಹ್ ನೆರೆಹೊರೆಯಲ್ಲಿನ ವಿನಾಶವನ್ನು ಉಪಗ್ರಹ ಚಿತ್ರದ ಬೂದಿ ಬಣ್ಣದ ಭಾಗದಿಂದ ನೋಡಬಹುದು.
ಬೀಟ್ ಹನೂನ್ನ ಬೀದಿಗಳು ದಾಳಿಯಿಂದ ನಲುಗಿ ಹೋಗಿವೆ. ಇಸ್ರೇಲ್‌ನಲ್ಲಿ 1,400 ಜನರನ್ನು ಕೊಂದು 200 ಜನರನ್ನು ಒತ್ತೆಯಾಳುಗಳನ್ನಾಗಿಸಿಕೊಂಡ ಗಡಿಯಾಚೆಗಿನ ದಾಳಿಯ ನಂತರ ಅಕ್ಟೋಬರ್ 7 ರಂದು ಯುದ್ಧವು ಆರಂಭವಾಯಿತು. ಬಳಿಕ ಇಸ್ರೇಲ್ ಸಾವಿರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ಭೀಕರ ದಾಳಿಯಿಂದ ಗಾಜಾದಲ್ಲಿ 7,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವೈಮಾನಿಕ ದಾಳಿಗಳು ದಿನದ 24 ಗಂಟೆಯೂ ಮುಂದುವರೆದಿದ್ದು, ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ. ಉಪಗ್ರಹ ಚಿತ್ರಗಳು ಉತ್ತರ ಗಾಜಾ ಪಟ್ಟಿ ಪ್ರದೇಶಗಳ ಹಾನಿಯ ತೀವ್ರತೆ ಎಷ್ಟಿದೆ ತೋರಿಸಿವೆ.
ಇಸ್ರೇಲ್ ಸೇನೆಯಿಂದ ಹಮಾಸ್ ಉಗ್ರರ ಬೇಟೆ: ಮತ್ತೊಂದೆಡೆ, ಗಾಜಾ ಪಟ್ಟಿಯನ್ನು ಛಿದ್ರ ಮಾಡುತ್ತಿರುವ ಇಸ್ರೇಲ್, ವಾಯುದಾಳಿಯ ಜೊತೆಗೆ ಭೂದಾಳಿಗೆ ಸೇನೆಯನ್ನು ಸಜ್ಜು ಮಾಡುತ್ತಿದೆ. 20ನೇ ದಿನದ ಯುದ್ಧದಲ್ಲಿ ಈವರೆಗೂ ಎರಡೂ ಕಡೆಗಳಿಂದ 7 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಇಷ್ಟಾದರೂ, ಹಠ ಬಿಡದ ಹಮಾಸ್ ಬಂಡುಕೋರರು ಇಸ್ರೇಲ್ ಗಡಿಗಳಲ್ಲಿ ನುಸುಳಿ ಬಂದು ಸೇನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಇದರ ವಿಡಿಯೋವೊಂದನ್ನು ಐಡಿಎಫ್ ಹಂಚಿಕೊಂಡಿದೆ.
ದಕ್ಷಿಣ ಇಸ್ರೇಲ್ನ ಕಿಬ್ಬುಜ್ ಬೀರಿ ಎಂಬಲ್ಲಿ ಹಮಾಸ್ ಉಗ್ರರನ್ನು ಹೊಡೆದುರುಳಿಸಿ ನಾಗರಿಕರನ್ನು ರಕ್ಷಿಸಲಾಗಿದೆ. ಕಾರಿನಲ್ಲಿ ಬರುವ ಉಗ್ರರು ಇಸ್ರೇಲ್ ಸೈನಿಕರನ್ನು ಕಂಡು ರಸ್ತೆ ಪಕ್ಕದಲ್ಲಿ ದಿಢೀರ್ ವಾಹನ ನಿಲ್ಲಿಸಿ ಓಟಕಿತ್ತಿದ್ದಾರೆ. ಇದನ್ನು ಕಂಡ ಸೈನಿಕರು ಗುಂಡಿನ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬೇಟೆಯಾಡುತ್ತಾರೆ. ಬಳಿಕ ಅಲ್ಲಿಂದ ಹಲವು ನಾಗರಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಗಾಜಾಪಟ್ಟಿಯಲ್ಲಿ ವೈಮಾನಿಕ ದಾಳಿ ಮುಂದುವರೆಸಿದ ಇಸ್ರೇಲ್: ಪರಿಹಾರ ಕಾರ್ಯಕ್ಕೆ ಅಡ್ಡಿ