ಟೆಲ್ ಅವೀವ್(ಇಸ್ರೇಲ್): ಇಸ್ರೇಲ್ ಮೇಲೆ ವೈಮಾನಿಕ ದಾಳಿ ನಡೆಸಿ ನೂರಾರು ಜನರ ಸಾವಿಗೆ ಕಾರಣವಾದ ಹಮಾಸ್‌ಗೆ ಇಸ್ರೇಲ್ ಖಡಕ್ ಎಚ್ಚರಿಕೆ ನೀಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಹಮಾಸ್‌ಗೆ , "ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಿಲ್ಲವಾದರೂ ಈ ಯುದ್ಧವನ್ನು ಮುಗಿಸುತ್ತದೆ" ಎಂದು ಗುಡುಗಿದ್ದಾರೆ.
ಈ ಹೇಳಿಕೆ ಬೆನ್ನಲ್ಲೇ ಹಮಾಸ್ನ ಏಟಿಗೆ ಎದಿರೇಟು ನೀಡಲು ಇಸ್ರೇಲ್ ಬರೋಬ್ಬರಿ 3,00,000 ಸೈನಿಕರನ್ನು ಒಳಗೊಂಡ ತುಕಡಿ ಸಿದ್ದಗೊಳಿಸಿದೆ. ಇಸ್ರೇಲ್ನ್ ಈ ಸಿದ್ಧತೆ 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರದ ಅತಿ ದೊಡ್ಡ ಸಜ್ಜುಗೊಳಿಸುವಿಕೆಯಾಗಿದೆ. "ಇಸ್ರೇಲ್ ಈಗ ಯುದ್ಧದಲ್ಲಿದೆ. ಆದರೆ, ನಾವಾಗಿಯೇ ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ನಡೆಸಲಾಗಿದೆ. ಆದರೆ ಇಸ್ರೇಲ್ ಈ ಯುದ್ಧಕ್ಕೆ ಮುನ್ನುಡಿ ಹಾಡದಿದ್ದರೂ, ಘೋರ ಯುದ್ಧಕ್ಕೆ ಅಂತ್ಯ ಹಾಡುತ್ತದೆ" ಎಂದು ಪ್ರಧಾನಿ ನೆತನ್ಯಾಹು ಹಮಾಸ್‌ಗೆ ವಾರ್ನಿಂಗ್ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಯಾವುದೇ ಎಚ್ಚರಿಕೆ ಇಲ್ಲದೇ ಹಮಾಸ್ ಉಗ್ರರು ಇಸ್ರೇಲ್ ಮೇಲೇ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ 2,300 ಇಸ್ರೇಲಿಗಳು ಗಾಯಗೊಂಡಿದ್ದು, 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದಾಳಿಯಿಂದ ಆಕ್ರೋಶಗೊಂಡಿರುವ ಪ್ರಧಾನಿ ನೆತನ್ಯಾಹು ಅವರು, ಹಮಾಸ್ ಈ ದಾಳಿಗೆ ಬೆಲೆ ತೆರುತ್ತಾರೆ. ಮತ್ತು ದೀರ್ಘಕಾಲ ಇದನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ ಎಂದಿದ್ದಾರೆ. " ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಐತಿಹಾಸಿಕ ಮಟ್ಟದಲ್ಲಿ ದೊಡ್ಡ ತಪ್ಪು ಮಾಡಿದ್ದೇವೆಂದು ಹಮಾಸ್‌ಗೆ ಅರ್ಥವಾಗಲಿದೆ. ಹಮಾಸ್ ಅಲ್ಲದೇ ಮುಂಬುರುವ ದಿನಗಳಲ್ಲಿ ಇಸ್ರೇಲ್ನ ಇತರ ಶತ್ರುಗಳಿಗೂ ನಾವೂ ನೆನೆಪಿನಲ್ಲಿ ಇಟ್ಟುಕೊಳ್ಳುವಂತೆ ಈ ದಾಳಿಗೆ ಪ್ರತ್ಯುತ್ತರವಾಗಿ ಎದಿರೇಟು ನೀಡುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಎಚ್ಚರಿಕೆ ಕೊಟ್ಟಿದ್ದಾರೆ.
ಜತೆಗೆ ಹಮಾಸ್ ಉಗ್ರ ಸಂಘಟನೆಯನ್ನು ಐಸಿಸ್ ಎಂದು ಕರೆದಿದ್ದಾರೆ. ಹಮಾಸ್ ವಿರುದ್ಧ ನಾಗರಿಕತೆಯ ಶಕ್ತಿಗಳು ಒಂದಾಗಲು ಮತ್ತು ಹಮಾಸ್ ಅನ್ನು ಸೋಲಿಸಲು ಕರೆ ನೀಡಿದರು. 'ಹಮಾಸ್ ಕೂಡ ಐಸಿಸ್'ಸೇ ಆಗಿದೆ. ಹೇಗೆ ಐಸಿಸ್ನ್ನು ಸೋಲಿಸಲು ನಾಗರಿಕತೆಯ ಶಕ್ತಿಗಳು ಒಗ್ಗೂಡಿದವೋ, ಹಾಗೆಯೇ ಹಮಾಸ್ನ್ನು ಸೋಲಿಸಲು ನಾಗರಿಕತೆಯ ಶಕ್ತಿಗಳು ಇಸ್ರೇಲ್ನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ ಇಸ್ರೇಲ್ಗೆ ಈಗಾಗಲೇ ಬೆಂಬಲ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ವಿಶ್ವದ ಇತರ ನಾಯಕರಿಗೆ ಧನ್ಯವಾದ ಅರ್ಪಿಸಿದರು.
"ನಾನು ಅಮೆರಿಕ ಅಧ್ಯಕ್ಷ ಬೈಡನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಮತ್ತು ಇಸ್ರೇಲ್ನ ಭದ್ರತೆಗಾಗಿ ಜೊತೆಯಾಗಿರುವ ಅಮೆರಿಕದ ಬದ್ಧತೆಗಾಗಿ ನಾನು ಮತ್ತೊಮ್ಮೆ ಇಸ್ರೇಲ್ನ ಎಲ್ಲಾ ನಾಗರಿಕರ ಪರವಾಗಿ ಬೈಡನ್ ಅವರಿಗೆ ಧನ್ಯವಾದ ತಿಳಸಲು ಬಯಸುತ್ತೇನೆ" ಎಂದು ಪ್ರಧಾನಿ ಬೆಂಜಮಿನ್ ಹೇಳಿದರು.
"ಹಮಾಸ್ ವಿರುದ್ಧ ಹೋರಾಟದಲ್ಲಿ, ಇಸ್ರೇಲ್ ಕೇವಲ ತನ್ನ ದೇಶದ ಜನರಿಗಾಗಿ ಮಾತ್ರ ಹೋರಾಡುತ್ತಿಲ್ಲ. ಇದು ಅನಾಗರಿಕತೆಯ ವಿರುದ್ಧ ಎದ್ದು ನಿಂತಿರುವ ಪ್ರತಿಯೊಂದು ದೇಶಕ್ಕಾಗಿ ಹೋರಾಡುತ್ತಿದೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಇಸ್ರೇಲ್ ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ" ಎಂದು ತಮ್ಮೊಳಗೆ ಹಮಾಸ್ನ ವಿರುದ್ಧ ಕುದಿಯುತ್ತಿರುವ ಪ್ರತಿಕಾರದ ಭಾವನೆಯನ್ನು ಭಾಷಣದಲ್ಲಿ ಹೊರಹಾಕಿದರು. ಮುಂದುವರೆದು ಇಸ್ರೇಲಿಯ ಸೇನೆಯು ಹಮಾಸ್ ವಿರುದ್ಧ ಈ ಹಿಂದೆಂದೂ ಕಾಣದಷ್ಟು ದೈತ್ಯ ಬಲದೊಂದಿಗೆ ಯುದ್ಧ ನಡೆಸಲಿದೆ ಎಂದು ನೆತನ್ಯಾಹು ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ. (ಎಎನ್ಐ)
ಇದನ್ನೂ ಓದಿ: ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯ ಪ್ಲಾನ್ ತಯಾರಾಗಿದ್ದು ಇರಾನ್ನಲ್ಲಿ: ವರದಿಯಲ್ಲಿ ಬಹಿರಂಗ!