ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು ಮಂಜೂರು ಮಾಡಿದೆ. ಯಾವುದೇ ಪ್ರಕರಣದಲ್ಲಿ ಇಮ್ರಾನ್ ಅವರನ್ನು ಮತ್ತೆ ಬಂಧಿಸಿದರೆ ದೇಶಾದ್ಯಂತ ಅಶಾಂತಿ ಉಂಟಾಗುತ್ತದೆ ಎಂಬ ಎಚ್ಚರಿಕೆಯ ನಂತರ ಈ ಆದೇಶ ಬಂದಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಮಿಯಾಂಗುಲ್ ಹಸನ್ ಔರಂಗಜೇಬ್ ಮತ್ತು ಸಮನ್ ರಫತ್ ಇಮ್ತಿಯಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಈ ಮೊದಲು ವಿಚಾರಣೆಯ ಸಂದರ್ಭದಲ್ಲಿ ಇಮ್ರಾನ್ ಖಾನ್, ನನ್ನನ್ನು ಬಂಧಿಸಲಾಗುವುದು ಎಂದು ನೂರಕ್ಕೆ ನೂರಷ್ಟು ಖಚಿತವಾಗಿತ್ತು ಎಂದು ಹೇಳಿದರು. ಇದರ ಬೆನ್ನಲ್ಲೇ ನ್ಯಾಯಾಲಯದ ಆವರಣದಲ್ಲಿ ಇಮ್ರಾನ್ ಪರ ಘೋಷಣೆಗಳು ಮೊಳಗಿದವು. ಆಗ ನ್ಯಾಯಾಲಯದ ಸಿಬ್ಬಂದಿ ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ, ಘೋಷಣೆಗಳು ಮುಂದುವರೆದ ಕಾರಣ ಅಸಮಾಧಾನಗೊಂಡ ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್, ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿ ಪೀಠದಿಂದ ನಿರ್ಗಮಿಸಿದರು. ಶುಕ್ರವಾರದ ಪ್ರಾರ್ಥನೆಯ ನಂತರ ವಿಚಾರಣೆಯನ್ನು ಪುನರಾರಂಭಿಸಲಾಯಿತು.
ಅಲ್ ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿಯ ಬಂಧನವು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ಗುರುವಾರ ಹೇಳಿತ್ತು. ಹೀಗಾಗಿ ಇಂದು ಹೈಕೋರ್ಟ್ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿತ್ತು. ಇಮ್ರಾನ್ ಖಾನ್ ಹೆಚ್ಚಿನ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಹೈಕೋರ್ಟ್ ಬಳಿ ನೂರಾರು ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಇದೇ ವೇಳೆ ಪಿಟಿಐ ಮತ್ತು ಇಮ್ರಾನ್ ಖಾನ್ ವಿರುದ್ಧದ ಎಲ್ಲ ಪ್ರಕರಣಗಳನ್ನು ಕ್ಲಬ್ ಮಾಡಲು ಮತ್ತು ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಇಮ್ರಾನ್ ಖಾನ್ ಪರ ವಕೀಲರು ನಾಲ್ಕು ಹೆಚ್ಚುವರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮೇ 9ರಂದು ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ಇಮ್ರಾನ್ ಖಾನ್ ಬಂಧನ ನಂತರ ಪಾಕಿಸ್ತಾನ ಹೊತ್ತಿ ಉರಿದಿತ್ತು. ಪಂಜಾಬ್, ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ: ತಕ್ಷಣ ಇಮ್ರಾನ್ ಖಾನ್ ಬಿಡುಗಡೆಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ