ಬಾಗ್ದಾದ್: ಇರಾಕ್ನಲ್ಲೀಗ ಶ್ರೀಲಂಕಾ ಮಾದರಿಯ ಪ್ರತಿಭಟನೆ ನಡೆಯುತ್ತಿದೆ. ಬುಧವಾರ ಬಾಗ್ದಾದ್‌ನಲ್ಲಿ ನೂರಾರು ಪ್ರತಿಭಟನಾಕಾರರು ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದರು. ಇವರ ಪೈಕಿ ಹೆಚ್ಚಿನ ಪ್ರತಿಭಟನಾಕಾರರು ಶಿಯಾ ನಾಯಕ ಮುಕ್ತದಾ ಅಲ್-ಸದರ್ ಅವರ ಬೆಂಬಲಿಗರಾಗಿದ್ದಾರೆ. ತನ್ನ ರಾಜಕೀಯ ವಿರೋಧಿ ಬಣದಲ್ಲಿರುವ ಇರಾನ್ ಬೆಂಬಲಿತ ಪಕ್ಷವು ಮಾಜಿ ಸಚಿವ ಮತ್ತು ಮಾಜಿ ಪ್ರಾಂತೀಯ ಗವರ್ನರ್ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರನ್ನು ಪ್ರಧಾನಿ ಹುದ್ದೆಗೆ ಕಣಕ್ಕಿಳಿಸಿರುವುದನ್ನು ಖಂಡಿಸಿ ಅಲ್- ಸದರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾಕ್‌ನ ಹಲವು ನಗರಗಳಿಂದ ಆಗಮಿಸಿದ ಜನರು ಬಾಗ್ದಾದ್‌ನ ಬಿಗಿ ಭದ್ರತೆಯ ಹಸಿರು ವಲಯ ಪ್ರವೇಶಿಸಿದರು. ಈ ಪ್ರದೇಶ ಸರ್ಕಾರಿ ಕಟ್ಟಡಗಳು ಮತ್ತು ರಾಜತಾಂತ್ರಿಕ ಕಚೇರಿಗಳ ನೆಲೆಯಾಗಿದ್ದು, ನಂತರ ಸಂಸತ್ತಿಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಸಂಸದರು ಅಲ್ಲಿರಲಿಲ್ಲ. ಕೇವಲ ಭದ್ರತಾ ಸಿಬ್ಬಂದಿ ಮಾತ್ರವಿದ್ದು ಪ್ರತಿಭಟನಾಕಾರರು ಸುಲಭವಾಗಿ ಕಟ್ಟಡ ಪ್ರವೇಶಿಸಲು ಸಾಧ್ಯವಾಗಿತ್ತು.
ಪ್ರತಿಭಟನಾಕಾರರು ಅಲ್-ಸದರ್ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದರು. ಸಂಸತ್ತಿನ ಮುಖ್ಯ ಗೇಟ್‌ನಲ್ಲಿ ಗುಂಪು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಪ್ರತಿಭಟನಾಕಾರರು ಗ್ರೀನ್ ಝೋನ್‌ನ ಎರಡು ಪ್ರವೇಶದ್ವಾರಗಳಲ್ಲಿ ಜಮಾಯಿಸಿ ಪೊಲೀಸರು ಹಾಕಿದ್ದ ಸಿಮೆಂಟ್ ಗೋಡೆ ಒಡೆದು ‘ಅಲ್-ಸುಡಾನಿ ಔಟ್" ಎಂದು ಘೋಷಣೆ ಕೂಗುತ್ತಾ ಒಳನುಗ್ಗಲು ಯತ್ನಿಸಿದರು. ಈ ವೇಳೆ ಸಿಮೆಂಟ್ ಗೋಡೆಗಳನ್ನು ಕೆಡವಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮೊದಲು ಜಲಫಿರಂಗಿ ಬಳಸಿದ್ದಾರೆ. ನೂರಾರು ಜನರು ಇರಾಕ್‌ನ ಸಂಸತ್ತಿಗೆ ಪ್ರವೇಶಿಸಿ ಇರಾಕ್ ಧ್ವಜ ಹಿಡಿದಿರುವ ಚಿತ್ರಗಳು ಮತ್ತು ಪ್ರತಿಭಟನೆಯ ವಿಡಿಯೋಗಳು ವೈರಲ್ ಆಗಿವೆ. ಕೆಲವರು ಟೇಬಲ್ ಮತ್ತು ಕುರ್ಚಿಗಳ ಮೇಲೆ ಹತ್ತಿ ದಾಂಧಲೆ ನಡೆಸಿದರು.
ಈ ನಾಟಕೀಯ ಬೆಳವಣಿಗೆಯ ನಂತರ ಹಂಗಾಮಿ ಪ್ರಧಾನಿ ಮುಸ್ತಫಾ ಅಲ್-ಕದಿಮಿ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಹಸಿರು ವಲಯವನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಹುದ್ದೆಗೆ ಹೊಸ ಮುಖ: ಅಕ್ಟೋಬರ್ 2021 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಕ್ತಾದ ಅಲ್-ಸದರ್ ಪಕ್ಷವು 73 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ 329 ಸದಸ್ಯ ಬಲದ ಸಂಸತ್ತಿನಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಇರಾಕ್‌ನ ಅಧ್ಯಕ್ಷರಾಗಲು ಅಗತ್ಯ ಬಹುಮತ ಪಡೆಯಲು ಮುಕ್ತಾದ ಅಲ್-ಸದರ್ ವಿಫಲರಾದರು. ಆ ಬಳಿಕ ಸರ್ಕಾರ ರಚನೆಯ ಮಾತುಕತೆಯಿಂದಲೂ ಹಿಂದೆ ಸರಿದಿದ್ದರು.
ಇದನ್ನೂ ಓದಿ: ಶ್ರೀಲಂಕಾದ ಅಧ್ಯಕ್ಷ, ಪ್ರಧಾನಿ ನಿವಾಸದಲ್ಲಿ ಕಳ್ಳತನ: ಪುರಾತನ 1 ಸಾವಿರ ಕಲಾಕೃತಿ ನಾಪತ್ತೆ