ಟೆಹರಾನ್: ಭಯೋತ್ಪಾದನೆ ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವುದು, ಭಯೋತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಪ್ರಚೋದಿಸುವುದು, ಹಿಂಸಾಚಾರ ಮತ್ತು ದ್ವೇಷ-ಪ್ರಚೋದನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ ಇರಾನ್ ವಿದೇಶಾಂಗ ಸಚಿವಾಲಯವು ಹಲವಾರು ಬ್ರಿಟಿಷ್ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಬಂಧಿತ ಕಾನೂನು ನಿಯಮಗಳು ಮತ್ತು ಮಂಜೂರಾತಿ ಕಾರ್ಯವಿಧಾನಗಳ ಚೌಕಟ್ಟಿನೊಳಗೆ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ಇದೊಂದು ರೀತಿಯ ಪ್ರತಿಕ್ರಿಯೆ ಎಂದು ಅದರಲ್ಲಿ ಹೇಳಲಾಗಿದೆ.
ಬ್ರಿಟನ್ ನೆಲದಿಂದ ಇರಾನ್‌ನಲ್ಲಿ ಗಲಭೆ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಸಂಘಟಿಸುವ, ಪ್ರಚೋದಿಸುವ ಭಯೋತ್ಪಾದಕರು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುವವರನ್ನು ಬ್ರಿಟಿಷ್ ಸರ್ಕಾರ ಬೆಂಬಲಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಬ್ರಿಟನ್‌ನ ರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಸೆಂಟರ್, ಬ್ರಿಟಿಷ್ ಸರ್ಕಾರದ ಸಂವಹನ ಕೇಂದ್ರ ಕಛೇರಿ, ವೋಲಂಟ್ ಮೀಡಿಯಾ, ಗ್ಲೋಬಲ್ ಮೀಡಿಯಾ, ಡಿಎಂಎ ಮೀಡಿಯಾ ಮತ್ತು ಇರಾನಿಯನ್ ವಿರೋಧಿ ಟಿವಿ ಚಾನೆಲ್‌ಗಳಾದ ಬಿಬಿಸಿ ಪರ್ಷಿಯನ್ ಮತ್ತು ಇರಾನ್ ಇಂಟರ್‌ನ್ಯಾಶನಲ್ ಸಂಸ್ಥೆಗಳು ನಿರ್ಬಂಧ ಹೇರಲಾದ ವ್ಯಕ್ತಿ, ಸಂಘಟನೆಗಳ ಪಟ್ಟಿಯಲ್ಲಿ ಸೇರಿವೆ.
ಭದ್ರತೆ ಇಲಾಖೆಯ ಬ್ರಿಟಿಷ್ ರಾಜ್ಯ ಸಚಿವ ಟಾಮ್ ತುಗೆಂಧತ್ ಮತ್ತು ಕೊಲ್ಲಿಯಲ್ಲಿ ಬ್ರಿಟಿಷ್ ಮಿಲಿಟರಿ ಕಮಾಂಡರ್ ಡಾನ್ ಮ್ಯಾಕಿನ್ನನ್ ಅವರನ್ನು ಕೂಡ ನಿರ್ಬಂಧಗಳ ಪಟ್ಟಿಯಲ್ಲಿ ಇರಾನ್ ಸೇರಿಸಿದೆ. ನಿರ್ಬಂಧ ಪಟ್ಟಿಯಲ್ಲಿರುವ ವ್ಯಕ್ತಿಗಳು ಇರಾನ್ ವೀಸಾ ಪಡೆಯುವಂತಿಲ್ಲ ಮತ್ತು ಇರಾನ್‌ಗೆ ಪ್ರವೇಶಿಸುವಂತಿಲ್ಲ. ಇರಾನ್‌ನಲ್ಲಿನ ಅವರ ಎಲ್ಲ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇರಾನ್ ಮೇಲೆ ವೈದ್ಯಕೀಯ ನಿರ್ಬಂಧ ಹೇರಿದ ಮತ್ತು 22 ವರ್ಷದ ಯುವತಿ ಮಹ್ಸಾ ಅಮೀನಿ ಸಾವಿನ ನಂತರ ದೇಶದಲ್ಲಿ ಅಭದ್ರತೆ ಉಂಟುಮಾಡಲು ಯತ್ನಿಸಿದ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಇರಾನ್ ವಿದೇಶಾಂಗ ಮಂತ್ರಿ ಹೊಸೆನ್ ಆಮಿರ್ ಅಬ್ದೊಲ್ಲಾಹಿಯಾನ್ ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ ಹಾಕಿಕೊಳ್ಳದ US ಜರ್ನಲಿಸ್ಟ್ ಜೊತೆ ಸಂದರ್ಶನ ನಿರಾಕರಿಸಿದ ಇರಾನ್ ಅಧ್ಯಕ್ಷ