ಕೈರೋ: ಹಿಜಾಬ್ ವಿರೋಧಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಿಸಿದ ಆರೋಪದ ಮೇರೆಗೆ ದೇಶದ ಅತ್ಯಂತ ಪ್ರಸಿದ್ಧ ನಟಿಯೊಬ್ಬರನ್ನು ಇರಾನ್ ಅಧಿಕಾರಿಗಳು ಬಂಧಿಸಿದ್ದಾರೆ. 'ದಿ ಸೇಲ್ಸ್‌ಮ್ಯಾನ್' ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ನಟಿ ತರನೆಹ್ ಅಲಿದೋಸ್ತಿ ಬಂಧಿತೆ.
ಇತ್ತೀಚೆಗೆ ಹಿಜಾಬ್ ವಿರೋಧಿ ಪ್ರತಿಭಟನೆಯ ವೇಳೆ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆ ವ್ಯಕ್ತಿಗೆ ಬೆಂಬಲ ಸೂಚಿಸುವಂತೆ ನಟಿ ಇನ್ಸ್ಸ್ಟಾಗ್ರಾಮ್ನಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದರು. ಇದಾದ ಒಂದು ವಾರದ ನಂತರ ನಟಿಯನ್ನು ಬಂಧಿಸಲಾಗಿದೆ.
ನಟಿ ಬರೆದಿದ್ದೇನು?: ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮೊಹ್ಸೆನ್ ಶೇಕರಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ರಕ್ತಪಾತ ನೋಡುತ್ತಿರುವ ಮತ್ತು ಕ್ರಮ ಕೈಗೊಳ್ಳದ ಪ್ರತಿಯೊಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವೀಯತೆಗೆ ಅವಮಾನ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:
ಹಿಜಾಬ್ ಧರಿಸದ್ದಕ್ಕೆ ನೈತಿಕ ಪೊಲೀಸ್ಗಿರಿ.. ಚಿತ್ರಹಿಂಸೆಗೆ ನರಳಿ ಕೋಮಾದಲ್ಲೇ ಪ್ರಾಣಬಿಟ್ಟ ಯುವತಿ!
ಕರ್ನಾಟಕದಿಂದ ಇರಾನ್‌ವರೆಗೆ...: ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್ ವಿರೋಧಿಸಿ ಮಹಿಳೆಯರ ಒಕ್ಕೊರಲ ಧ್ವನಿ!
ಮತ್ತಿಬ್ಬರು ನಟಿಯರ ಬಂಧನ, ಬಿಡುಗಡೆ: ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಕ್ಕಾಗಿ ಇರಾನ್‌ನ ಮತ್ತಿಬ್ಬರು ಪ್ರಸಿದ್ಧ ನಟಿಯರಾದ ಹೆಂಗಮೆಹ್ ಘಜಿಯಾನಿ ಮತ್ತು ಕಟಾಯುನ್ ರಿಯಾಹಿ ಅವರನ್ನು ಅಧಿಕಾರಿಗಳು ಬಂಧಿಸಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಇರಾನ್‌ನ 80 ನಗರಗಳಿಗೆ ಹರಡಿದ ಹಿಜಾಬ್ ವಿರೋಧಿ ಕಿಚ್ಚು: 300ಕ್ಕೂ ಹೆಚ್ಚು ಮಂದಿ ಸಾವು, 14 ಸಾವಿರ ಜನರ ಸೆರೆ
ಇರಾನ್ ಭದ್ರತಾ ಪಡೆಗಳ ದಬ್ಬಾಳಿಕೆಯಿಂದ ಪ್ರತಿಭಟನೆಯಲ್ಲಿ ಈವರೆಗೆ ಕನಿಷ್ಠ 495 ಜನರು ಸಾವನ್ನಪ್ಪಿದ್ದಾರೆ. ಸುಮಾರು 18,200ಕ್ಕೂ ಹೆಚ್ಚು ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.