ಪಾಲೆಂಬಾಂಗ್ (ಇಂಡೋನೇಷ್ಯಾ): ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳು ಇಸ್ಲಾಮಿಕ್ ಪ್ರಾರ್ಥನೆ ಮಾಡಿ ಬಳಿಕ ಹಂದಿಮಾಂಸ ಸೇವನೆ ಮಾಡಿರುವ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಕ್ಕೆ ನ್ಯಾಯಾಲಯ 20 ಲಕ್ಷ ದಂಡ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಮಾಡಿದೆ. ಇಸ್ಲಾಂ ಧರ್ಮದಲ್ಲಿ ಹಂದಿಮಾಂಸ ಸೇವನೆಗೆ ನಿಷೇಧವಿದೆ. ಆರೋಪಿ ಮಹಿಳೆಯನ್ನು ಲೀನಾ ಲುಟ್ಫಿಯಾವತಿ ಎಂದು ಗುರುತಿಸಲಾಗಿದೆ.
ಟಿಕ್ಟಾಕ್ನಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಲೀನಾ ಹೊಂದಿದ್ದಾರೆ. ವಿಡಿಯೋದಲ್ಲಿ, ಹಂದಿ ಮಾಂಸ ಸೇವನೆಗೂ ಮುನ್ನಾ ಆಕೆ ದೇವರ ಪ್ರಾರ್ಥನೆ ಬಳಕೆ ಮಾಡಿರುವುದು ಕಂಡು ಬಂದಿದೆ. ಲೀನಾ ಕೂಡ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಧರ್ಮ ನಿಂದನೆಯಡಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆ. ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಲೀನಾ ಕ್ಷಮೆ ಯಾಚಿಸಿದ್ದಾರೆ. ಕಳೆದ ಮಾರ್ಚ್ನಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದರು. ಈ ವಿಡಿಯೋ ಹೆಚ್ಚಿನ ವೀಕ್ಷಣೆಯನ್ನೂ ಪಡೆದುಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಲೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೀನಾ, "ವಾಸ್ತವವಾಗಿ ನಾನು ದೇವರ ಹೆಸರ ಪ್ರಾರ್ಥನೆ ಮಾಡಿ ನಂತರ ಹಂದಿಮಾಂಸ ಸೇವನೆ ಮಾಡಿರುವುದು ತಪ್ಪು ಎಂದು ಮನವರಿಕೆಯಾಗಿದೆ. ಈ ಬಗ್ಗೆ ಹಲವು ಬಾರಿ ನ್ಯಾಯಾಲಯಕ್ಕೆ ಕ್ಷಮೆ ಕೂಡ ಕೇಳಿದ್ದೇನೆ. ಆದರೆ ಈ ತಪ್ಪಿಗೆ ನ್ಯಾಯಾಲಯ ಎರಡು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸುತ್ತದೆ ಎಂದು ನಾನು ನಿರೀಕ್ಷಿ ಮಾಡಿರಲಿಲ್ಲ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ಇಂಡೋನೇಷ್ಯಾವೂ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ. ಇಸ್ಲಾಂ ಧರ್ಮದಲ್ಲಿ ಹಂದಿಮಾಂಸವನ್ನು ಹರಾಮ್ (ನಿಷೇಧ) ಎಂದು ಪರಿಗಣಿಸಲಾಗುತ್ತದೆ.
ಕ್ರಿಶ್ಚಿಯನ್ ಧರ್ಮದ ಜಕಾರ್ತದ ಗವರ್ನರ್ ಬಸುಕಿ ತ್ಜಹಾಜಾ ಪೂರ್ಣಮಾ ಎಂಬವರು 2017ರಲ್ಲಿ ಚುನಾಚಣೆ ಪ್ರಚಾರದ ವೇಳೆ ಕುರಾನ್ನ ಸ್ಲೋಕಗಳನ್ನು ಉಲ್ಲೇಖಿಸಿ ಭಾಷಣ ಮಾಡಿದಕ್ಕಾಗಿ ಧರ್ಮನಿಂದನೆಯ ಆರೋಪದಡಿ ಅವರನ್ನು ಬಂಧಿಸಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. 2018 ರಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಚೀನಾದ ಮಹಿಳೆಯನ್ನು 18 ತಿಂಗಳ ಕಾಲ ಬಂಧಿಸಲಾಗಿತ್ತು. ಮಸೀದಿಯ ಪ್ರಾರ್ಥನೆಯ ಸದ್ದು ಜೋರಾಗಿ ಕೇಳಿ ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಚೀನಾ ಮಹಿಳೆ ದೂರಿದ್ದರು.
ಇದನ್ನೂ ಓದಿ: ಕಠಿಣ ಹಿಜಾಬ್ ಮಸೂದೆಗೆ ಇರಾನ್ ಸಂಸತ್ತು ಅಂಗೀಕಾರ: ಸಾರ್ವಜನಿಕವಾಗಿ ಸ್ಕಾರ್ಫ್ ಧರಿಸದಿದ್ದರೆ 10 ವರ್ಷದವರೆಗೆ ಜೈಲು ಶಿಕ್ಷೆ