ಹೈದರಾಬಾದ್: ದೇಶೀಯವಾಗಿ ಅಕ್ಕಿ ಬೆಲೆ ನಿಯಂತ್ರಿಸಲು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ನಿರ್ಧಾರ ಅಮೆರಿಕದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲಿನ ನಿಷೇಧದೊಂದಿಗೆ ವಿದೇಶದಲ್ಲಿರುವ ಭಾರತೀಯರು ಭಯಭೀತರಾಗಿದ್ದಾರೆ. ಹೀಗಾಗಿ ಅನಿವಾಸಿ ಭಾರತೀಯರು ಅಕ್ಕೆಯನ್ನು ಖರೀದಿಸಲು ಮುಗಿಬಿದ್ದಿದ್ದು, ಅವ್ಯವಸ್ಥೆ ಉಂಟಾಗಿದೆ. ಅಮೆರಿಕದಲ್ಲಿ ಈ ಪರಿಸ್ಥಿತಿ ವಿಶೇಷವಾಗಿ ಕಂಡು ಬಂದಿತು. ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ ತಕ್ಷಣ, ಬೆಲೆ ಏರಿಕೆಯ ಭಯದಿಂದ ಅನೇಕ ಅನಿವಾಸಿ ಭಾರತೀಯರು ಅಕ್ಕಿ ದಾಸ್ತಾನು ಮಾಡಲು ಸೂಪರ್ ಮಾರ್ಕೆಟ್‌ಗಳಿಗೆ ಲಗ್ಗೆಯಿಟ್ಟರು.
ಅಮೆರಿಕ ಹಾಗೂ ಕೆನಡಾದಲ್ಲೂ ಇದೇ ಪರಿಸ್ಥಿತಿ ಇದೆ. ಆ ದೇಶಗಳಲ್ಲಿ ವಾಸಿಸುವ ಭಾರತೀಯರು ವಿಶೇಷವಾಗಿ ದಕ್ಷಿಣ ಭಾರತದವರು ಅವರ ಮುಖ್ಯ ಆಹಾರ ಅಕ್ಕಿ. ಅಕ್ಕಿ ಖರೀದಿಸಲು ಧಾವಿಸಿದ್ದರಿಂದ ಅನೇಕ ಅಂಗಡಿಗಳಲ್ಲಿ ಅವ್ಯವಸ್ಥೆ ಉಂಟಾಯಿತು. ಕೆಲವರು ಕೆಲವು ತಿಂಗಳುಗಳವರೆಗೆ ಅಕ್ಕಿ ಸಂಗ್ರಹಿಸಲು ಇಚ್ಛಿಸಿ ಮಾಲ್ಗಳಿಗೆ ದೌಡಾಯಿಸಿದರು. ಇದರಿಂದಾಗಿ ಕೆಲವೆಡೆ ಸರತಿ ಸಾಲುಗಳು ಕಂಡು ಬಂದವು. ಅನೇಕ ಭಾರತೀಯರು ಹತ್ತಾರು ಅಕ್ಕಿ ಮೂಟೆಗಳನ್ನು ಕಾರುಗಳಲ್ಲಿ ಸಾಗಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಅಕ್ಕಿ ರಫ್ತು ನಿಷೇಧದ ಹಿನ್ನೆಲೆಯಲ್ಲಿ ಅಮೆರಿಕದ ಕೆಲವು ಮಳಿಗೆಗಳು ಬೆಲೆಯನ್ನು ಹೆಚ್ಚಿಸಿವೆ. ಈ ಹಿಂದೆ 18 ಡಾಲರ್ ಇದ್ದ ಅಕ್ಕಿಯ ಬೆಲೆಯನ್ನು 50 ಡಾಲರ್‌ಗೆ ಏರಿಸಲಾಗಿದೆ ಎಂದು ಹಲವು ಅನಿವಾಸಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲ ಅಂಗಡಿಗಳಲ್ಲಿ ಒಬ್ಬರಿಗೆ ಒಂದು ಚೀಲ ಎಂದು ಸೂಚನಾ ಫಲಕ ಹಾಕುತ್ತಿದ್ದಾರೆ. ಅಕ್ಕಿ ಖರೀದಿಸಲು ತಡವಾಗಿ ಹೋದ ಕೆಲವರಿಗೆ ನೋ ಸ್ಟಾಕ್ ಬೋರ್ಡ್ ಕೂಡ ಕಾಣಿಸಿತು ಎಂದು ತಿಳಿದು ಬಂದಿದೆ.
ಅಕ್ಕಿ ರಫ್ತು ನಿಷೇಧ: ದೇಶದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಇದಕ್ಕೆ ಕಾರಣ ಹೆಚ್ಚಿದ ಮಾರುಕಟ್ಟೆ ಮತ್ತು ಕಡಿಮೆ ಪೂರೈಕೆ ಆಗಿದೆ. ಹೀಗಾಗಿ ದೇಶೀಯ ಅಕ್ಕಿ ಬೆಲೆ ಏರಿಕೆ ಮುನ್ನವೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿತ್ತು.
ಈ ನಿಷೇಧವು ಭಾಗಶಃ ಮಿಲ್ ಮಾಡಿದ, ಸಂಪೂರ್ಣವಾಗಿ ಮಿಲ್ ಮಾಡಿದ ಮತ್ತು ಪಾಲಿಶ್ ಮಾಡದ ಬಿಳಿ ಅಕ್ಕಿಯ ರಫ್ತಿಗೆ ಅನ್ವಯಿಸುತ್ತದೆ. ಅಧಿಸೂಚನೆ ಹೊರಡಿಸುವ ಮೊದಲೇ ಅಕ್ಕಿಯನ್ನು ಲೋಡ್ ಮಾಡಲು ಪ್ರಾರಂಭಿಸಿದ್ದರೆ ಅಂತಹ ರಫ್ತುಗಳನ್ನು ಅನುಮತಿಸಲಾಗುವುದು ಎಂದು ಡಿಜಿಎಫ್‌ಟಿ ಹೇಳಿತ್ತು.
ಸರ್ಕಾರವು ಅನುಮತಿಸಿದ ದೇಶಗಳಿಗೆ ಅಕ್ಕಿಯ ರಫ್ತುಗಳನ್ನು ಆಹಾರ ಭದ್ರತೆಯ ಅವಶ್ಯಕತೆಗಳ ಅಡಿ ವಿನಾಯಿತಿ ನೀಡಲಾಗುತ್ತದೆ. ಚಂಡಮಾರುತ ಪ್ರಭಾವದಿಂದ ಈ ವರ್ಷ ಮುಂಗಾರು ತಡವಾಗಿ ಪ್ರವೇಶಿಸಿದೆ. ಇದರಿಂದಾಗಿ ಹಲವೆಡೆ ಮಳೆ ವಿಳಂಬವಾಗಿದೆ. ಇನ್ನೊಂದೆಡೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಇನ್ನು ಕೆಲವೆಡೆ ಬೆಳೆ ನಾಶವಾಗಿದೆ. ಅದರಲ್ಲೂ ಉತ್ತರದಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಬಾಸ್ಮತಿಯೇತರ ಅಕ್ಕಿ ರಫ್ತು ಅನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಓದಿ: ಅಕ್ಕಿ ಬೆಲೆ ದುಬಾರಿ ಆಗುವ ಮೊದಲೇ ಎಚ್ಚೆತ್ತುಕೊಂಡ ಸರ್ಕಾರ.. ಅಕ್ಕಿ ರಫ್ತು ನಿಷೇಧಿಸಿದ ಕೇಂದ್ರ