ವಾಷಿಂಗ್ಟನ್ (ಅಮೆರಿಕ) : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಕೊಲೆ ಮಾಡಲು ಮತ್ತು ಅಧಿಕಾರ ಪಡೆಯುವ ಉದ್ದೇಶದಿಂದಲೇ ಭಾರತೀಯ ಮೂಲದ ಯುವಕ ಬಾಡಿಗೆ ಟ್ರಕ್ ಅನ್ನು ವೈಟ್ ಹೌಸ್ ತಡೆಗೋಡೆಗೆ ಅಪ್ಪಳಿಸಿದ್ದ ಎಂದು ಮಾಧ್ಯಮಗಳು ಹೇಳಿವೆ. 19 ವರ್ಷದ ಭಾರತೀಯ ಮೂಲದ ಯುವಕ ಸಾಯಿ ವರ್ಷಿತ್ ಕಂದುಲ ಎಂಬಾತ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ರಕ್ ಒಂದನ್ನು ಲಫಾಯೆಟ್ ಪಾರ್ಕ್ ಬದಿಯ ಉತ್ತರ ಭಾಗದ ಭದ್ರತಾ ತಡೆಗೋಡೆಗೆ ಹಾಯಿಸಿದ್ದ. ಘಟನೆಯ ನಂತರ ಸ್ಥಳದಲ್ಲಿದ್ದ ಜನ ಆತಂಕದಿಂದ ಓಡಿ ಪಾರಾಗಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೈಟ್ ಹೌಸ್ ಗೇಟ್ನಿಂದ ಸಾಕಷ್ಟು ದೂರದಲ್ಲಿ ಈ ಘಟನೆ ನಡೆದಿದ್ದರೂ ಸುರಕ್ಷತಾ ಕ್ರಮವಾಗಿ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಬೇಕಾಯಿತು. ಅಲ್ಲದೆ ಹತ್ತಿರದ ಹೇ ಆ್ಯಡಮ್ಸ್ ಹೆಸರಿನ ಹೊಟೇಲ್ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಲಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಮಿಸ್ಸೋರಿ ಚೆಸ್ಟರ್ಫೀಲ್ಡ್ ನಿವಾಸಿಯಾದ ಕಂದುಲಾ ಅಪಘಾತ ನಡೆಸುವ ಮುನ್ನ ಸೇಂಟ್ ಲೂಯಿಸ್ನಿಂದ ಒನ್ ವೇ ಟಿಕೆಟ್ನಲ್ಲಿ ಡಲ್ಲಾಸ್ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದಿದ್ದ. ಹಾಗೆ ಬಂದ ತಕ್ಷಣವೇ ಬಾಡಿಗೆಗೆ ಟ್ರಕ್ ಪಡೆದು ದುಷ್ಕೃತ್ಯ ಎಸಗಿದ್ದ.
ಆರೋಪಿಯು ವಾಹನವನ್ನು ಶ್ವೇತಭವನದ ಹೊರಗಿನ ಕಾಲುದಾರಿಯ ಮೇಲೆ, ಉತ್ತರ ಭಾಗದ ಲೋಹದ ತಡೆಗೋಡೆಗೆ ಹಾಯಿಸಿದ್ದ. ಕಂದುಲಾ ಆರಂಭದಲ್ಲಿ ಟ್ರಕ್ ಅನ್ನು ಹಿಮ್ಮುಖವಾಗಿ ಚಲಿಸಿದ್ದ. ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸ್ ಅಧಿಕಾರಿಗಳು ಆತನನ್ನು ಬಂಧಿಸುವಷ್ಟರಲ್ಲಿ ಎರಡನೇ ಬಾರಿ ತಡೆಗೋಡೆಗೆ ಅಪ್ಪಳಿಸಿದ್ದ. ಕಂದುಲಾ ಈ ಅಪಘಾತ ಎಸಗಲು ಆರು ತಿಂಗಳಿನಿಂದ ಪ್ಲ್ಯಾನ್ ಮಾಡಿದ್ದ ಹಾಗೂ ಇಡೀ ಯೋಜನೆಯನ್ನು ಹಸಿರು ಬಣ್ಣದ ಪುಸ್ತಕವೊಂದರಲ್ಲಿ ಬರೆದಿದ್ದ ಎಂಬ ಅಂಶವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.
ವೈಟ್ ಹೌಸ್ನೊಳಗೆ ನುಗ್ಗಿ ದೇಶದ ಅಧಿಕಾರವನ್ನು ಪಡೆದುಕೊಳ್ಳುವ ಇರಾದೆಯನ್ನು ಆತ ಹೊಂದಿದ್ದನಂತೆ. ಹೇಗೆ ಅಧಿಕಾರ ಪಡೆದುಕೊಳ್ಳುವೆ ಎಂದು ಕೇಳಿದಾಗ, ಅಧ್ಯಕ್ಷರನ್ನು ಕೊಂದು ಅಧಿಕಾರ ಪಡೆಯಲಿದ್ದೆ ಎಂದು ಆತ ಪೊಲೀಸ್ ಅಧಿಕಾರಿಗಳಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಅಲ್ಲದೆ ತನ್ನ ಉದ್ದೇಶ ಸಾಧನೆಯ ಮಧ್ಯೆ ಬರುವ ಯಾರನ್ನಾದರೂ ಕೊಲ್ಲಲು ಸಿದ್ಧವಾಗಿದ್ದೆ ಎಂದು ಹೇಳಿಕೊಂಡಿದ್ದಾನೆ.
ಅಮೆರಿಕ ದೇಶದ 1000 ಡಾಲರ್ ಮೊತ್ತದ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾನಿ ಮಾಡಿದ ಆರೋಪದ ಮೇಲೆ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅಪಘಾತ ನಡೆಸುವ ಸಮಯದಲ್ಲಿ ಆರೋಪಿ ಸಾಯಿ ಕಂದುಲಾ ತನ್ನ ಬ್ಯಾಗ್ನಿಂದ ಸ್ವಸ್ತಿಕದ ಚಿತ್ರವಿರುವ ಧ್ವಜವೊಂದನ್ನು ತೆಗೆದು ಪ್ರದರ್ಶಿಸಿದ್ದ. ನಾಜಿಗಳ ಶ್ರೇಷ್ಠ ಇತಿಹಾಸದಿಂದ ಪ್ರೇರಿತನಾಗಿ ಧ್ವಜವನ್ನು ಆನ್ಲೈನ್ ಮೂಲಕ ತರಿಸಿಕೊಂಡಿದ್ದಾಗಿ ಆತ ಹೇಳಿದ್ದಾನೆ. ನಾಜಿಗಳ ಸರ್ವಾಧಿಕಾರ ಸ್ವಭಾವ ಮತ್ತು ಅವರ ಆಡಳಿತ ಶೈಲಿಯನ್ನು ಮೆಚ್ಚಿಕೊಂಡಿರುವುದಾಗಿ ಹಾಗೂ ಹಿಟ್ಲರ್ನನ್ನು ಓರ್ವ ಪ್ರಬಲ ನಾಯಕನೆಂದು ಭಾವಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ : CPEC ಪ್ರಾಜೆಕ್ಟ್ ವಿಳಂಬ: ಪಾಕ್ ವಿರುದ್ಧ ಚೀನಾ ಆಕ್ರೋಶ