ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿಕೊಂಡು ಟ್ರಕ್ ಚಲಾಯಿಸಿ ಶ್ವೇತ ಭವನದ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆಸಿದ ಭಾರತೀಯ ಮೂಲದ ಯುವಕ ಸಾಯಿ ವರ್ಷಿತ್ ಕಂದುಲ (19) ಎಂಬಾತನಿಗೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂ. ($2,50,000) ದಂಡ ವಿಧಿಸುವ ಸಾಧ್ಯತೆ ಕಂಡುಬಂದಿದೆ.
ಬುಧವಾರ ಫೆಡರಲ್ ಕೋರ್ಟ್ ನ್ಯಾಯಾಧೀಶ ರಾಬಿನ್ ಮೆರಿವೆದರ್ ಅವರ ಮುಂದೆ ಆರೋಪಿ ವರ್ಷಿತ್ನನ್ನು ಹಾಜರುಪಡಿಸಲಾಯಿತು. ಈ ವೇಳೆ ಮೇ 30 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವಂತೆ ಅವರು ಆದೇಶ ಹೊರಡಿಸಿದ್ದಾರೆ. ಅಮೆರಿಕದ ಮಿಸೌರಿ ರಾಜ್ಯದಲ್ಲಿ ನೆಲೆಸಿರುವ ಸಾಯಿ ವರ್ಷಿತ್, ಶ್ವೇತ ಭವನಕ್ಕೆ ಟ್ರಕ್ ಚಲಾಯಿಸಿಕೊಂಡು ಬಂದು ಅಲ್ಲಿನ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದ ನಂತರ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಘಟನೆಯಿಂದ ಯಾರಿಗೂ ಗಾಯಗಳಾಗಿರಲಿಲ್ಲ.
ಅಪಘಾತದ ಬಳಿಕ ಟ್ರಕ್‌ನಲ್ಲಿ ಯಾವುದೇ ಸ್ಫೋಟಕಗಳಿರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದರು. ಬಳಿಕ ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ಗೆ ಸೇರಿದ ನಾಜಿ ಧ್ವಜ ವಾಹನದಲ್ಲಿರುವುದು ಕಂಡುಬಂದಿತ್ತು. ಜೋ ಬೈಡನ್ ಅವರನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ವಶಪಡಿಸಿಕೊಳ್ಳುವುದು ತನ್ನ ಗುರಿ ಎಂದು ತಿಳಿಸಿದ ಆರೋಪಿ, ತಾನು ಒಬ್ಬ ನಿರುದ್ಯೋಗ ದತ್ತಾಂಶ ವಿಶ್ಲೇಷಕ ಎಂದು ಪರಿಚಯಿಸಿಕೊಂಡಿದ್ದ.
ಇದನ್ನೂ ಓದಿ : ಜೂನ್ 22 ರಂದು ಮೋದಿ ಅಮೆರಿಕಕ್ಕೆ: ಶ್ವೇತಭವನದಲ್ಲಿ ಜೋ ಬೈಡನ್ ಅದ್ಧೂರಿ ಔತಣಕೂಟ
ಕಿತ್ತಳೆ ಬಣ್ಣದ ಜಂಪ್‌ಸೂಟ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾದ ಆರೋಪಿ, ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ವಿನಮ್ರವಾಗಿ ಉತ್ತರಿಸಿದ್ದಾನೆ ಎನ್ನಲಾಗಿದೆ. ವರ್ಷಿತ್ ವಿರುದ್ಧ ಪೊಲೀಸರು ಆಸ್ತಿ ನಾಶ, ನಿರ್ಲಕ್ಷ್ಯ ಚಾಲನೆ, ಅಮೆರಿಕದ ಅಧ್ಯಕ್ಷರಿಗೆ ಕೊಲೆ ಬೆದರಿಕೆ, ಅನುಮತಿ ಇಲ್ಲದೆ ಶ್ವೇತ ಭವನಕ್ಕೆ ಅತಿಕ್ರಮ ಪ್ರವೇಶ ಮುಂತಾದ ಹಲವು ಆರೋಪಗಳಡಿ ಕೇಸ್ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 2 ಕೋಟಿ ರೂಪಾಯಿ ದಂಡವನ್ನು ಮುಂದಿನ ವಾರ ವಿಧಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ : ಮತ್ತೊಮ್ಮೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವೆ: ಜೋ ಬೈಡನ್
ಘಟನೆಯ ವಿವರ : ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಶ್ವೇತ ಭವನದತ್ತ ಟ್ರಕ್ ಚಲಾಯಿಸಿಕೊಂಡು ಭದ್ರತಾ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದಿದ್ದನು. ಬಳಿಕ ಟ್ರಕ್‌ನಿಂದ ಕೆಳಗಿಳಿದು ನಾಜಿ ಧ್ವಜ ಹಾರಿಸಿ, ಮುಂದಿನ ಅಧಿಕಾರ ನಾಜಿಯದ್ದೇ ಎಂದು ಕಿರುಚಾಡಿದ್ದ. ಈ ವೇಳೆ ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದರು. ಬಳಿಕ, ಈ ಕುರಿತು ತನಿಖೆ ನಡೆಸಿದಾಗ ಆರೋಪಿಯು ಭಾರತೀಯ ಮೂಲದವನಾದ ಸಾಯಿ ವಸಿಷ್ಠ ಕುಂದುಲಾ ಎಂದು ತಿಳಿದುಬಂದಿತ್ತು. ನಾಜಿಗಳ ಆಡಳಿತದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಈತ, ಬೇಕಂತಲೇ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾನೆ. ಜೊತೆಗೆ, ಬೈಡನ್ ಅವರನ್ನು ಕೊಲ್ಲುವ ಉದ್ದೇಶದಿಂದ ಕುಂದುಲಾ ಟ್ರಕ್ ಬಾಡಿಗೆ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದರು.