ನವದೆಹಲಿ: ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರದ ಗೋಡೆ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿರುವುದನ್ನು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿ ಶನಿವಾರ ತೀವ್ರವಾಗಿ ಖಂಡಿಸಿದೆ. ಈ ದುಷ್ಕೃತ್ಯದಿಂದ ಭಾರತೀಯ ಸಮುದಾಯದ ಭಾವನೆಗಳಿಗೆ ನೋವಾಗಿದೆ ಎಂದು ಕಿಡಿಕಾರಿದೆ.
ಈ ಕುರಿತು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಮಿಷನ್, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ''ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಎಸ್ಎಂವಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದ ಭಾರತ ವಿರೋಧಿ ಗೋಡೆಬರಹ ಬರೆದು ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆ ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಬಗ್ಗೆ ಯುಎಸ್ ಅಧಿಕಾರಿಗಳು ಆರೋಪಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸಿದ್ದೇವೆ" ಎಂದು ತಿಳಿಸಿದೆ.
ವರದಿಗಳ ಪ್ರಕಾರ, ಗುರುವಾರ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಶಂಕಿತ ಖಲಿಸ್ತಾನ್ ಪರ ಕಾರ್ಯಕರ್ತರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದೆ. ಹಿಂದೂ ದೇವಾಲಯದ ಹೊರ ಗೋಡೆ ಮೇಲೆ ಭಾರತ ವಿರೋಧಿ ಬರಹ ಬರೆಯಲಾಗಿದೆ. ನೆವಾರ್ಕ್ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಈ ಹಿಂದೆ, ಕೆನಡಾದಲ್ಲೂ ಖಲಿಸ್ತಾನಿಗಳ ಅಟ್ಟಹಾಸ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯದ ಗೋಡೆ ಮೇಲೆ ಭಾರತ ವಿರೋಧಿ ಬರಹ ಬರೆದಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ಪ್ರಕರಣವು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಗೌರಿ ಶಂಕರ ಮಂದಿರದಲ್ಲಿ ನಡೆದಿದ್ದ ಈ ಕೃತ್ಯವನ್ನು ಟೊರೊಂಟೊದ ಭಾರತೀಯ ಕಾನ್ಸುಲೇಟ್ ಜನರಲ್ ಖಂಡಿಸಿದ್ದರು. ಜೊತೆಗೆ ಆಸ್ಟ್ರೇಲಿಯಾದಲ್ಲೂ ಇಂಥದ್ದೇ ದುಷ್ಕೃತ್ಯ ಜರುಗಿತ್ತು.
ಅಲ್ಲದೆ, ಈ ಹಿಂದೆ ಯುಕೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸೇರಿದಂತೆ ವಿವಿಧ ದೇಶಗಳಲ್ಲಿ ಈ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಭಾರತ ವಿರೋಧಿ ಗೋಡೆ ಬರಹಗಳನ್ನು ಬರೆದಿರುವ ಪ್ರಕರಣಗಳು ನಡೆದಿವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಲ್ಲಿನ ಹಲವಾರು ದೇವಾಲಯಗಳ ಗೋಡೆಗಳ ಮೇಲೆ ಬರಹಗಳನ್ನು ಬರೆದು ವಿಕೃತಿ ಮೆರೆದಿದ್ದರು. ಭಾರತ ಸರ್ಕಾರವು ಈ ಎಲ್ಲ ಘಟನೆಗಳನ್ನು ವಿರೋಧ ವ್ಯಕ್ತಪಡಿಸಿತ್ತು.
ಅಮೆರಿಕದಲ್ಲಿ ಎಸ್‌ಎಫ್‌ಜೆ ನಾಯಕ ಪನ್ನುನ್‌ನನ್ನು ಹತ್ಯೆ ಮಾಡುವ ಸಂಚನ್ನು ವಿಫಲಗೊಳಿಸಿದ ಭಾರತೀಯ ಅಧಿಕಾರಿಯ ವಿರುದ್ಧದ ಆರೋಪಗಳನ್ನು ಭಾರತವು ಪ್ರಸ್ತುತ ತನಿಖೆ ನಡೆಸುತ್ತಿದೆ. ಇದು ಕಳವಳಕಾರಿ ವಿಚಾರ ಮತ್ತು ಬಲವಾದ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: ನೈಜರ್‌ನಿಂದ ಸೇನೆ ಹಿಂತೆಗೆದುಕೊಂಡ ಫ್ರಾನ್ಸ್