ವಾಷಿಂಗ್ಟನ್ : ದಶಕಗಳಷ್ಟು ಹಳೆಯದಾದ ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್‌ನಿಂದ ಸಂಕಷ್ಟ ಎದುರಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ನರಿಗೆ ಉದ್ಯೋಗ ದೃಢೀಕರಣ ಪತ್ರ ನೀಡುವ ನಿಯಮಗಳನ್ನು ಸಡಿಲಿಸುವಂತೆ ಬೈಡನ್ ಆಡಳಿತಕ್ಕೆ ಯುಎಸ್ನಲ್ಲಿನ ಭಾರತೀಯ ವಲಸಿಗರ ಸಂಸ್ಥೆ ಒತ್ತಾಯಿಸಿದೆ.
ಸುಮಾರು 1.1 ಮಿಲಿಯನ್ ವೀಸಾ ಹೊಂದಿರುವ ಭಾರತೀಯ ಮೂಲದ ವಲಸಿಗರು ಗ್ರೀನ್ ಕಾರ್ಡ್‌ಗಾಗಿ I-485 ಅಡಿ ಅರ್ಜಿ ಸಲ್ಲಿಸಲು ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆಯೇ ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ (FIIDS) ವರದಿಯೊಂದು ಬಿಡುಗಡೆ ಮಾಡಿದೆ. ಪ್ರತಿ ದೇಶದ ಜನರಿಗೆ ಗ್ರೀನ್ ಕಾರ್ಡ್ ನೀಡುವ ಮಿತಿ ಸೀಮಿತವಾಗಿದೆ.
ಯಾವುದೇ ದೇಶಕ್ಕೆ ಏಳು ಶೇಕಡಾಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಈ ನಿಟ್ಟಿನಲ್ಲಿ ನೋಡುವುದಾದರೆ ಗ್ರೀನ್ ಕಾರ್ಡ್ ಪಡೆಯಲು ಅರ್ಜಿದಾರರು ಸುಮಾರು 135 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಈ ಪೈಕಿ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವವರಲ್ಲಿ 400,000ಕ್ಕೂ ಹೆಚ್ಚಿನ ಜನ ಗ್ರೀನ್ ಕಾರ್ಡ್ ಪಡೆಯುವ ಮೊದಲೇ ಸಾಯಬಹುದು ಎಂದು ಹೇಳಿದೆ.
ಗ್ರೀನ್ ಕಾರ್ಡ್ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲಿ ಉದ್ಯೋಗದ ದೃಢೀಕರಣ ಪತ್ರಗಳನ್ನು ನೀಡುವುದರಿಂದ ಭಾರತೀಯ ಮೂಲದ ಅಮೆರಿಕನ್ನರಿಗೆ ಮತ್ತು ಅವರ ಕುಟುಂಬದವರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ವರದಿ ಹೇಳಿದೆ.
ಎಫ್‌ಐಐಡಿಎಸ್ ನೀತಿ ಮತ್ತು ಕಾರ್ಯತಂತ್ರಗಳ ಮುಖ್ಯಸ್ಥ ಖಂಡೇರಾವ್ ಕಾಂಡ್ ಅವರು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ನಿರ್ದೇಶಕ ಯು.ಆರ್ ಜಡ್ಡೌ ಅವರಿಗೆ ಪತ್ರ ಬರೆದಿದ್ದು, ವಲಸಿಗರಿಗೆ ಉದ್ಯೋಗ ದೃಢೀಕರಣ ಕಾರ್ಡ್‌ಗಳನ್ನು ನೀಡುವುದರಿಂದ ರಾಷ್ಟ್ರದ ಆರ್ಥಿಕತೆಗೂ ಸಹಾಯಕವಾಗಲಿದೆ. ಉದ್ಯೋಗ ಆಧಾರಿತ ಅರ್ಜಿದಾರರಿಗೆ I-485 ಪ್ರಕ್ರಿಯೆಗಾಗಿ ಕಾಯುವ ಅಗತ್ಯವಿಲ್ಲದೇ ಐದು ವರ್ಷಗಳ ಅವಧಿಗೆ I-140 ಅನುಮೋದಿತ ಅರ್ಜಿದಾರರಿಗೆ ಉದ್ಯೋಗದ ದೃಢೀಕರಣ ಕಾರ್ಡ್ ನೀಡಿ ಎಂದು ಉತ್ತಾಯಿಸಿದ್ದಾರೆ.
ಕೂಡಲೇ ಈ ಬದಲಾವಣೆಗಳನ್ನು ಕಾರ್ಯಗತಗೊಳಿಸುವುದರಿಂದ ವಲಸೆ ಕುಟುಂಬಗಳು ಎದುರಿಸುತ್ತಿರುವ ಒತ್ತಡವನ್ನು ಪರಿಹರಿಸಬಹುದಾಗಿದೆ. ಜತೆಗೆ ಪ್ರತಿಭೆ ಮತ್ತು ವೈವಿಧ್ಯತೆಯನ್ನು ಮೌಲ್ಯೀಕರಿಸುವ ಮತ್ತು ಪೋಷಿಸುವ ರಾಷ್ಟ್ರವಾಗಿ ಯುನೈಟೆಡ್ ಸ್ಟೇಟ್ಸ್ ಗುರುತಿಸಿಕೊಳ್ಳಲಿದೆ ಎಂದು ಖಂಡೇರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕದಲ್ಲಿ, ಗ್ರೀನ್ ಕಾರ್ಡ್ ಅನ್ನು ಅಧಿಕೃತವಾಗಿ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂದು ಕರೆಯಲಾಗುತ್ತದೆ. ಗ್ರೀನ್ ಕಾರ್ಡ್ ಹೊಂದಿರುವವರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಾಶ್ವತ ನಿವಾಸದ ಸವಲತ್ತು ನೀಡಲಾಗುತ್ತದೆ.