ಪೋರಬಂದರ್(ಗುಜರಾತ್): ಅರಬ್ಬಿ ಸಮುದ್ರದ ಭಾರತದ ಜಲಗಡಿ ಪ್ರದೇಶದಲ್ಲಿ ಈ ಹಿಂದೆ ಹಲವು ಬಾರಿ ಪಾಕಿಸ್ತಾನದ ಬೋಟ್‌ಗಳನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಭಾರತೀಯ ಕರಾವಳಿ ಕಾವಲು ಪಡೆ ಅನುಮಾನಾಸ್ಪದ ಪಾಕ್ ದೋಣಿಯನ್ನು ತನ್ನ ಜಲಪ್ರದೇಶದಿಂದ ವಶಪಡಿಸಿಕೊಂಡಿದೆ. ದೋಣಿಯಲ್ಲಿದ್ದ 13 ಜನರನ್ನು ಬಂಧಿಸಿ ಓಖಾ ಬಂದರಿಗೆ ಕರೆತರಲಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ಅರಿಂಜಯ್ 21 ನವೆಂಬರ್ 2023ರಂದು ಸಮುದ್ರದಲ್ಲಿ ಗಸ್ತು ತಿರುಗುತ್ತಿರುವಾಗ ಪಾಕ್ ದೋಣಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. 21 ನವೆಂಬರ್ 2023ರಂದು ಅಂತರರಾಷ್ಟ್ರೀಯ ಕಡಲ ಗಡಿ ರೇಖೆಯ ಬಳಿ ಭಾರತೀಯ ನೀರಿನಲ್ಲಿ ಸುಮಾರು 15 ಕಿ.ಮೀ ಮೀನುಗಾರಿಕೆ ನಡೆಸುತ್ತಿದ್ದರು. ಭಾರತದ ಹಡಗು ಕಂಡ ಪಾಕ್ ದೋಣಿ ತಮ್ಮ ದೇಶದತ್ತ ಓಡಲು ಪ್ರಾರಂಭಿಸಿತು. ಕೋಸ್ಟ್ ಗಾರ್ಡ್ ಶಿಪ್ ಈ ದೋಣಿಯನ್ನು ತಡೆದು ಮುಂದಿನ ಕ್ರಮ ಕೈಗೊಂಡಿದೆ.
ದೋಣಿ ನಾಜ್-ರೆ-ಕರಮ್ (ರಿಜಿಸ್ಟರ್ ನಂ. 15653-ಬಿ) ನವೆಂಬರ್ 19, 2023ರಂದು 13 ಸಿಬ್ಬಂದಿಗಳೊಂದಿಗೆ ಕರಾಚಿಯಿಂದ ನಿರ್ಗಮಿಸಿದ್ದ ಬಗ್ಗೆ ಮಾಹಿತಿ ದೊರತಿದೆ. ಈ ಪ್ರದೇಶದಲ್ಲಿ ದೋಣಿಯ ಮೂಲಕ ಮೀನುಗಾರಿಕೆಯನ್ನು ವಿವರಿಸಲು ಮತ್ತು ಸಮರ್ಥಿಸಿಕೊಳ್ಳಲು ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಎಲ್ಲಾ ಏಜೆನ್ಸಿಗಳಿಂದ ಸಂಪೂರ್ಣ ತನಿಖೆ ಮತ್ತು ಜಂಟಿ ವಿಚಾರಣೆಗಾಗಿ ದೋಣಿಯನ್ನು ಓಖಾ ಬಂದರಿಗೆ ತರಲಾಗಿದೆ. ಹಲವು ಬಾರಿ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಭಾರತದ ನೀರಿನಲ್ಲಿ ಪತ್ತೆಯಾಗಿವೆ ಎಂಬುದು ಗಮನಾರ್ಹ.
'ಗ್ಯಾಲಕ್ಸಿ ಲೀಡರ್‌ಶಿಪ್' ಹಡಗು ಹೈಜಾಕ್ ಮಾಡಿದ್ದು ಹೇಗೆ?: ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ 'ಗ್ಯಾಲಕ್ಸಿ ಲೀಡರ್' ಹೆಸರಿನ ಸರಕು ಸಾಗಣೆ ಹಡಗನ್ನು ಎಮೆನ್ ದೇಶದ ಹೌತಿ ಬಂಡುಕೋರರು ಇತ್ತೀಚೆಗೆ ಅಪಹರಿಸಿದ್ದರು. ಇಸ್ರೇಲ್‌ಗೆ ಸೇರಿದ ಈ ಹಡಗನ್ನು ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿ ಯೆಮನ್‌ನ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಬಳಿಕ ವಿಡಿಯೋ ಬಿಡುಗಡೆ ಮಾಡಿ ಅಟ್ಟಹಾಸ ಮೆರೆದಿದ್ದರು. ಸರಕು ಹಡಗನ್ನು ಹೇಗೆ ಅಪಹರಿಸಲಾಗಿತ್ತು ಎಂಬುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಈ ಶಿಪ್ನಲ್ಲಿ ಇಸ್ರೇಲ್ ಅಥವಾ ಭಾರತದ ಪ್ರಜೆಗಳು ಇರಲಿಲ್ಲ.
ಇದನ್ನೂ ಓದಿ: ಹೌತಿ ಬಂಡುಕೋರರು 'ಗ್ಯಾಲಕ್ಸಿ ಲೀಡರ್‌ಶಿಪ್' ಹಡಗು ಹೈಜಾಕ್ ಮಾಡಿದ್ದು ಹೇಗೆ? ಭಯಾನಕ ವಿಡಿಯೋ