ವಾಷಿಂಗ್ಟನ್ (ಅಮೆರಿಕ) : ಈ ವಾರ ಇಂಡಿಯಾನಾಪೊಲಿಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 42 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 13 ರಂದು ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಇಂಡಿಯಾನಾಪೊಲಿಸ್ ಸಮೀಪದ ಗ್ರೀನ್‌ವುಡ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯವರಾದ ಸಿಂಗ್, 1996 ರಲ್ಲಿ 15 ನೇ ವಯಸ್ಸಿನಲ್ಲಿ ಯುಎಸ್‌ಗೆ ಆಗಮಿಸಿದ್ದರು.
ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, "ಅಕ್ಟೋಬರ್ 12 ರ ಸಂಜೆ ರಸ್ತೆ ದುರಂತ ಸಂಭವಿಸಿದ್ದು, ಗಾಯಗೊಂಡಿದ್ದ ಸಿಂಗ್ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, 15 ವರ್ಷದ ಪುತ್ರ ಹಾಗೂ 10 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರು 2010 ರಿಂದ ಇಂಡಿಯಾನಾಪೊಲಿಸ್‌ನಲ್ಲಿ ವಾಸಿಸುತ್ತಿದ್ದರು. ಇನ್ನು ಉಳಿದ ಗಾಯಾಳುಗಳನ್ನು ಐಯು ಹೆಲ್ತ್ ಮೆಥೋಡಿಸ್ಟ್ ಆಸ್ಪತ್ರೆಗೆ ಸಾಗಿಸಲಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರಿಜೋನಾದ ಹೆಪ್ಪುಗಟ್ಟಿದ ಸರೋವರದಲ್ಲಿ ಕನಿಷ್ಠ ಮೂವರು ಭಾರತೀಯ - ಅಮೆರಿಕನ್ನರು ಮುಳುಗಿ ಸಾವನ್ನಪ್ಪಿದ್ದರು. ಮೃತರನ್ನು ನಾರಾಯಣ ಮುದ್ದಣ(49), ಹರಿತಾ ಮುದ್ದಣ ಮತ್ತು ಗೋಕುಲ್ ಮೆಡಿಸೆಟಿ (47) ಎಂದು ಗುರುತಿಸಲಾಗಿದೆ ಅಂತಾ ಕೊಕೊನಿನೊ ಕೌಂಟಿ ಶೆರಿಫ್ ಕಚೇರಿ (CCSO) ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಪ್ರಕರಣಗಳು- 7 ಜನ ದುರ್ಮರಣ : ಟ್ರಕ್ ಮತ್ತು ಕ್ರೂಸರ್ ಜೀಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಡುಂಗಾರಪುರ ಜಿಲ್ಲೆಯಲ್ಲಿ ನಿನ್ನೆ (ಭಾನುವಾರ) ನಡೆದಿದೆ. ಘಟನೆಯಿಂದ ಹತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರೂಸರ್ ಜಖಂಗೊಂಡಿದೆ. ಬಿಚ್ಚಿವಾಡ ಪೊಲೀಸ್ ಠಾಣಾ ವ್ಯಾಪ್ತಿಯ ರತನ್ಪುರ ಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ದುರ್ಘಟನೆ ಜರುಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಕ್ರೂಸರ್ ಪಲ್ಟಿ ಹೊಡೆದಿದ್ದು ನಜ್ಜುಗುಜ್ಜಾಗಿದೆ. ಪರಿಣಾಮ, 7 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಉಳಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಡುಂಗಾರಪುರಕ್ಕೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಟ್ರಕ್ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ
ಜೆಎನ್ಯು ಕ್ಯಾಂಪಸ್ನಲ್ಲಿ ಓರ್ವ ಸಾವು : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ (ಅಕ್ಟೋಬರ್ 14 ರಂದು) ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾತ್ರಿ 2.30 ರ ಸುಮಾರಿಗೆ ಬೈಕ್ಗಳಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು, ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಇತರೆ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜಸ್ಥಾನ: ಟ್ರಕ್ ಡಿಕ್ಕಿಯಾಗಿ ಕ್ರೂಸರ್ ಜಖಂ : 7 ಜನ ದುರ್ಮರಣ, 10 ಮಂದಿಗೆ ಗಾಯ