ವಿಶ್ವಸಂಸ್ಥೆ: ವಿಶ್ವದ, ದೇಶದ ಶಾಂತಿಗೆ ಮಾರಕವಾದ ಭಯೋತ್ಪಾದನೆ ತಡೆಗಟ್ಟುವ ಹೋರಾಟದಲ್ಲಿ ದ್ವಂದ್ವ ನೀತಿ ಇರಬಾರದು. ಅನುಕೂಲಕ್ಕೆ ತಕ್ಕಂತೆ ಈ ಪಿಡುಗಿನ ವಿರುದ್ಧ ಹೋರಾಡಬಾರದು ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ರಾಯಭಾರಿ ರುಚಿರಾ ಕಾಂಭೋಜ್ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ "ಭಯೋತ್ಪಾದಕ ಕೃತ್ಯಗಳಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು" ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ದೊಡ್ಡ ಪಿಡುಗಾಗಿದೆ. ಅದರ ವಿರುದ್ಧ ನಮ್ಮ ನೀತಿಗಳು ಕಠಿಣವಾಗಿರಬೇಕು. ಇದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು ಎಂದರು.
ಭಯೋತ್ಪಾದಕರ ವಿರುದ್ಧ ತೊಡೆತಟ್ಟಿದಾಗ ದ್ವಂದ್ವ ನೀತಿ ಅನುಸರಿಸಬಾರದು. ಜಾಗತಿಕವಾಗಿ ಭಯೋತ್ಪಾದಕರ ಬೆದರಿಕೆಗಳು ಹೆಚ್ಚುತ್ತಿವೆ. ಹಲವು ದೇಶಗಳು ಈ ಪಿಡುಗಿನಿಂದ ನಲುಗುತ್ತಿವೆ. ಇದನ್ನು ಹತ್ತಿಕ್ಕಲು ಕಠಿಣ ಪ್ರಯತ್ನಗಳನ್ನು ನಡೆಸಬೇಕಿದೆ ಎಂದು ಹೇಳಿದರು.
ಕೆಲ ಅವಕಾಶವಾದಿ ಶಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ನಡೆದುಕೊಳ್ಳುತ್ತವೆ. ಇದು ಉಗ್ರರ ಉಪಟಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಯೋತ್ಪಾದಕರನ್ನು ಸಮರ್ಥನೆ, ಆಶ್ರಯ ನೀಡುವುದು ಕ್ರೂರ ಕೃತ್ಯ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಮೂದಲಿಸಿದರು.
ಓದಿ: ನಾವು ಮಂತ್ರಿಗಳು ನಮಗೆ ಕಾನೂನು ಮುರಿಯುವ ಅಧಿಕಾರ ಇದೆ..ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ!